ADVERTISEMENT

ಜೂನ್‌ 24 ರಿಂದ ಜುಲೈ 3ರವರೆಗೆ ಲೋಕಸಭೆ ಅಧಿವೇಶನ: ಸಚಿವ ಕಿರಣ್ ರಿಜಿಜು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2024, 4:46 IST
Last Updated 12 ಜೂನ್ 2024, 4:46 IST
<div class="paragraphs"><p>ಸಂಸತ್ತು</p></div>

ಸಂಸತ್ತು

   

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಇದೇ 24ರಿಂದ ಜುಲೈ 3ರ ತನಕ ನಡೆಯಲಿದೆ. 

ಈ ಸಂದರ್ಭದಲ್ಲಿ ನೂತನ ಸಂಸದರ ಪ್ರಮಾಣವಚನ, ಲೋಕಸಭಾಧ್ಯಕ್ಷರ ಆಯ್ಕೆ ಜರುಗಲಿದೆ. ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ. ರಾಜ್ಯಸಭೆಯ ಅಧಿವೇಶನವು ಇದೇ 27ರಿಂದ ಆರಂಭವಾಗಿ ಜುಲೈ 3ರಂದು ಮುಗಿಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಬುಧವಾರ ಪೋಸ್ಟ್‌ ಮಾಡಿದ್ದಾರೆ. 

ADVERTISEMENT

ಅಧಿವೇಶನದ ಮೊದಲ ಮೂರು ದಿನಗಳಲ್ಲಿ ನೂತನ ಸಂಸದರ ಪ್ರಮಾಣವಚನ ಹಾಗೂ ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜೂನ್ 27ರಂದು ರಾಷ್ಟ್ರಪತಿ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ತಮ್ಮ ಮಂತ್ರಿಮಂಡಲವನ್ನು ಪರಿಚಯಿಸಲಿದ್ದಾರೆ.

ಅಧಿವೇಶನಕ್ಕೆ ಮುನ್ನ ಹಂಗಾಮಿ ಸ್ಪೀಕರ್ ಅವರಿಗೆ ರಾಷ್ಟ್ರಪತಿ ಪ್ರಮಾಣವಚನ ಬೋಧಿಸಲಿದ್ದಾರೆ. ಸಾಮಾನ್ಯಗಾಗಿ ಲೋಕಸಭೆಯ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಲಾಗುತ್ತದೆ. ಕಾಂಗ್ರೆಸ್‌ನಿಂದ ಎಂಟು ಬಾರಿ ಗೆದ್ದಿರುವ ಕೋಡಿಕುನ್ನಿಲ್‌ ಸುರೇಶ್ ಅವರು ಹಿರಿಯ ಸಂಸದರಾಗಿದ್ದಾರೆ.

ಆಂಧ್ರ ಪ್ರದೇಶದ ಬಿಜೆಪಿ ಸಂಸದೆ ಡಿ.ಪುರಂದೇಶ್ವರಿ ಅವರು ಲೋಕಸಭಾಧ್ಯಕ್ಷರಾಗುವ ಸಂಭವ ಇದೆ. ಉಪಸಭಾಧ್ಯಕ್ಷ ಸ್ಥಾನವನ್ನು ಟಿಡಿಪಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ. 17ನೇ ಲೋಕಸಭೆಯಲ್ಲಿ ಉಪಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನೇ ನಡೆಸಿರಲಿಲ್ಲ. ಕೊನೆಯವರೆಗೂ ಈ ಹುದ್ದೆ ಖಾಲಿ ಇತ್ತು. 

ಸ್ಪೀಕರ್‌ ಹುದ್ದೆ ಹಾಗೂ ಇತರ ಕಾರ್ಯತಂತ್ರಗಳ ಕುರಿತು ಸಮಾಲೋಚಿಸಲು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಇದೇ 24ರ ಸುಮಾರಿಗೆ ಚರ್ಚೆ ನಡೆಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.