ಮುಂಬೈ: ಹವಾಮಾನ ವೈಪರೀತ್ಯ, ಕಾರ್ಯಾಚರಣೆ ಸಂಬಂಧಿತ ಕಾರಣ ಇತ್ಯಾದಿಯಿಂದಾಗಿ ಮಂಗಳವಾರ ಮತ್ತು ಬುಧವಾರ ಏರ್ ಇಂಡಿಯಾದ ಕೆಲ ವಿಮಾನಗಳ ಹಾರಾಟ ರದ್ದಾಗಿದ್ದರೆ, ಕೆಲವು ವಿಮಾನಗಳು ಮಾರ್ಗ ಬದಲಿಸಿದ್ದವು.
ಕಾರ್ಯಾಚರಣೆ ಸಂಬಂಧಿತ ಕಾರಣಗಳಿಂದಾಗಿ ಮುಂಬೈ–ಲಖನೌ ವಿಮಾನದ ಸಂಚಾರವನ್ನು ಜೂನ್ 17ರಂದು ರದ್ದು ಮಾಡಲಾಗಿತ್ತು. ಪ್ರಯಾಣಿಕರನ್ನು ಗಮ್ಯಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆ ಮಾಡಲಾಯಿತು ಎಂದು ಸಂಸ್ಥೆಯ ವಕ್ತಾರರು ತಿಳಿಸಿದರು.
ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದೆ. ವಿಮಾನಗಳ ಹಾರಾಟದ ಮಾರ್ಗ ಕೂಡ ಬದಲಾವಣೆ ಮಾಡಲಾಗಿದೆ. ಅಲ್ಲದೆ ಪರ್ಯಾಯ ಮಾರ್ಗದಲ್ಲಿ ಸಾಗುವ ವಿಮಾನಗಳು ತಡವಾಗಿ ತಲುಪುತ್ತಿವೆ. ಲಖನೌಗೆ ವಿಮಾನ ಸಂಚಾರ ರದ್ದುಪಡಿಸಲು ಇವೆಲ್ಲ ಕಾರಣಗಳಾಗಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನ ಸಂಚಾರ ರದ್ದುಗೊಂಡಿರುವುದರಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ಸೌಲಭ್ಯ ಒದಗಿಸಲಾಗಿದೆ. ಪ್ರಯಾಣ ರದ್ದು ಮಾಡಿದ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಹಿಂದಿರುಗಿಸಲಾಗುವುದು ಎಂದು ಅದು ಹೇಳಿದೆ.
ಏರ್ ಇಂಡಿಯಾ ಸಂಸ್ಥೆಯು ಮಂಗಳವಾರ ಏಳು ಅಂತರರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದು ಮಾಡಿತ್ತು. ಇದರೊಂದಿಗೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಪತನದ ಬಳಿಕ ಸಂಸ್ಥೆಯು ಸುಮಾರು 80 ವಿಮಾನಗಳ ಹಾರಾಟವನ್ನು ರದ್ದು ಮಾಡಿದಂತಾಗಿದೆ.
ಜ್ವಾಲಾಮುಖಿ ಸ್ಫೋಟ: ದೆಹಲಿಗೆ ಮರಳಿದ
ವಿಮಾನ ಮುಂಬೈ: ಇಂಡೊನೇಷ್ಯಾದ ಬಾಲಿ ವಿಮಾನ ನಿಲ್ದಾಣದ ಸಮೀಪ ಜ್ವಾಲಾಮುಖಿ ಸ್ಫೋಟಗೊಂಡ ಕಾರಣ ದೆಹಲಿ–ಬಾಲಿ ಏರ್ ಇಂಡಿಯಾ ವಿಮಾನವು ಮಾರ್ಗ ಬದಲಿಸಿ ರಾಷ್ಟ್ರ ರಾಜದಾನಿ ದೆಹಲಿಗೆ ಬುಧವಾರ ಬಂದಿಳಿಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿಕೆ ಮೂಲಕ ತಿಳಿಸಿದೆ. ವಿಮಾನವು ಸುರಕ್ಷಿತವಾಗಿ ಬಂದಿಳಿದಿದ್ದು ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಎಂದು ಹೇಳಿದೆ. ‘ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ದೆಹಲಿಯಿಂದ ಬಾಲಿಗೆ ಹೊರಟಿದ್ದ ಎಐ2145 ವಿಮಾನವನ್ನು ದೆಹಲಿಗೆ ವಾಪಸ್ ಕರೆಸಿಕೊಳ್ಳಲಾಯಿತು’ ಎಂದು ಅದು ತಿಳಿಸಿದೆ.
ದೆಹಲಿ ಬದಲು ವಾರಾಣಸಿಯಲ್ಲಿ ಇಳಿದ ವಿಮಾನ
ವಾರಾಣಸಿ: ದೆಹಲಿಯಲ್ಲಿ ಪ್ರತಿಕೂಲ ಹವಾಮಾನ ಇರುವುದರಿಂದ ಬಾಲಿ–ದೆಹಲಿ ಏರ್ ಇಂಡಿಯಾ ವಿಮಾನವು ಮಾರ್ಗ ಬದಲಿಸಿ ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು. ‘ದೆಹಲಿಯಲ್ಲಿ ಪ್ರತಿಕೂಲ ಹವಾಮಾನ ಇರುವುದರಿಂದ ಗೋಚರತೆ ಕಡಿಮೆ ಇತ್ತು. ಇಂಥ ಸಂದರ್ಭದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವುದು ಸುರಕ್ಷಿತವಲ್ಲದ ಕಾರಣ ಎಐ 2146 ವಿಮಾನದ ಮಾರ್ಗವನ್ನು ಬದಲಿಸಲಾಯಿತು’ ಎಂದು ವಾರಾಣಸಿ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ತಿಳಿಸಿದರು. ‘ವಿಮಾನದಲ್ಲಿ 187 ಮಂದಿ ಪ್ರಯಾಣಿಸುತ್ತಿದ್ದರು. ಮಂಗಳವಾರ ರಾತ್ರಿಯೇ ವಿಮಾನವು ಪುನಃ ದೆಹಲಿಗೆ ಮರಳಿತು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.