ADVERTISEMENT

ವಾರಾಣಸಿ | ಮಾರಿಷಸ್ PM ಜತೆ ಮೋದಿ ಚರ್ಚೆ; ದೆಹಲಿ ಆಚೆಗೆ ವಿದೇಶಾಂಗ ನೀತಿ: ಮಿಸ್ರಿ

ಏಜೆನ್ಸೀಸ್
Published 11 ಸೆಪ್ಟೆಂಬರ್ 2025, 11:34 IST
Last Updated 11 ಸೆಪ್ಟೆಂಬರ್ 2025, 11:34 IST
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ (ಪಿಟಿಐ ಚಿತ್ರ)
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ (ಪಿಟಿಐ ಚಿತ್ರ)   

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್‌ನ ಪ್ರಧಾನಿ ನವೀನ್‌ಚಂದ್ರ ರಾಮಗುಲಾಂ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಬುಧವಾರ ಮಾತುಕತೆ ನಡೆಸಿದರು.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ, ‘ದೆಹಲಿ ಆಚೆಗೆ ವಿದೇಶಾಂಗ ವ್ಯವಹಾರಗಳನ್ನು ತೆಗೆದುಕೊಂಡು ಹೋಗಬೇಕೆಂಬುದು ಪ್ರಧಾನಿ ಅವರ ಬಹುದಿನಗಳ ಕನಸು. ವಿದೇಶಾಂಗ ನೀತಿ ಎಂದರೆ ಅದು ದೆಹಲಿಯೋ ಅಥವಾ ಇನ್ಯಾವುದೋ ನಗರಗಳಲ್ಲ. ಬದಲಿಗೆ ವಿದೇಶಾಂಗ ನೀತಿ ಎಂಬುದು ದೇಶಕ್ಕೆ ಸಂಬಂಧಿಸಿದ್ದು ಎನ್ನುವುದು ಅವರ ಆಲೋಚನೆ’ ಎಂದಿದ್ದಾರೆ.

ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಿರುವ ಮಾರಿಷಸ್‌ಗೆ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ವಿಸ್ತರಿಸಿದ್ದಾರೆ ಎಂದು ಮಿಸ್ರಿ ಹೇಳಿದ್ದಾರೆ.

ADVERTISEMENT

‘ಪೋರ್ಟ್ ಲೂಯಿಸ್‌ನಲ್ಲಿ ಬಂದರು ನಿರ್ಮಾಣ, ಚಾಗೋಸ್‌ ಮರೈನ್‌ ಸಂರಕ್ಷಿತ ಪ್ರದೇಶದ ಮೇಲಿನ ಕಣ್ಗಾವಲಿಗೆ ನೆರವು ಹಾಗೂ ಹಲವು ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ನೆರವು ಒಳಗೊಂಡಿದೆ’ ಎಂದಿದ್ದಾರೆ.

‘ಸ್ಥಳೀಯ ಕರೆನ್ಸಿ ಬಳಕೆ ಕುರಿತು ಉಭಯ ರಾಷ್ಟ್ರಗಳು ಒಮ್ಮತಕ್ಕೆ ಬಂದಿವೆ. ಆದರೆ ಎರಡೂ ರಾಷ್ಟ್ರಗಳ ಕೇಂದ್ರ ಬ್ಯಾಂಕ್‌ಗಳ ಹಂತದಲ್ಲಿ ಚರ್ಚೆ ನಡೆದಿದೆ’ ಎಂದು ಪ್ರಶ್ನೆಯೊಂದಕ್ಕೆ ಮಿಸ್ರಿ ತಿಳಿಸಿದ್ದಾರೆ.

ಮಾರಿಷಸ್‌ನಲ್ಲಿ ಕಳೆದ ವರ್ಷ ಯುಪಿಐ ಮತ್ತು ರುಪೇ ಕಾರ್ಡ್‌ಗಳು ಬಿಡುಗಡೆಗೊಂಡವು. ಸ್ಥಳೀಯ ಕರೆನ್ಸಿ ಬಳಸಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗುವಂತ ವಾತಾವರಣ ನಿರ್ಮಿಸಲಾಗುವುದು. ಇದರೊಂದಿಗೆ ಮೂಲಸೌಕರ್ಯ, ಉದ್ಯೋಗ ಹಾಗೂ ಆರೋಗ್ಯ ಕ್ಷೇತ್ರಕ್ಕೂ ಆರ್ಥಿಕ ನೆರವನ್ನು ವಿಸ್ತರಿಸಿ ಪ್ರಧಾನಿ ಮೋದಿ ಚಾಲನೆ ನೀಡಿದರು ಎಂದು ಎಎನ್‌ಐ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.