ನವದೆಹಲಿ: ಪಾಕಿಸ್ತಾನವು ಭಾರತದಲ್ಲಿ ಗಡೆಯಾಚೆಯಿಂದ ಭಯೋತ್ಪಾದನೆಯನ್ನು ದೀರ್ಘಕಾಲದಿಂದ ಯಾವ ರೀತಿ ಪ್ರಾಯೋಜಿಸಿಕೊಂಡು ಬಂದಿದೆ ಮತ್ತು ತನ್ನ ನೆಲದಲ್ಲಿ ಯಾವುದೇ ಭಯೋತ್ಪಾದಕ ಕೃತ್ಯ ನಡೆದರೆ ಅದಕ್ಕೆ ಭಾರತವು ಹೇಗೆ ಪ್ರತಿಕ್ರಿಯಿಸಲು ದೃಢವಾಗಿ ನಿರ್ಧರಿಸಿದೆ ಎಂಬುದರ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಂಗಳವಾರ ಸರ್ವಪಕ್ಷಗಳ ಏಳು ನಿಯೋಗಗಳ ಪೈಕಿ, ಮೂರು ನಿಯೋಗಗಳಿಗೆ ಮಾಹಿತಿ ನೀಡಿದರು.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಮತ್ತು ‘ಆಪರೇಷನ್ ಸಿಂಧೂರ’ದ ನಂತರ ಭಾರತವು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವದ ಮುಂದೆ ತೆರೆದಿಡಲು ರಾಜತಾಂತ್ರಿಕ ಕಾರ್ಯಾಚರಣೆಯ ಹೆಜ್ಜೆ ಇರಿಸಿ, ಇದಕ್ಕಾಗಿ ಸರ್ವ ಪಕ್ಷಗಳ ಸಂಸದರ ನೇತೃತ್ವದಲ್ಲಿ ಏಳು ನಿಯೋಗಗಳನ್ನು ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಕಳುಹಿಸಿಕೊಡುತ್ತಿದೆ.
ಈ ನಿಯೋಗಗಳು ವಿದೇಶಗಳಿಗೆ ಭೇಟಿ ನೀಡುವ ಮೊದಲು ನಿಯೋಗದ ಸದಸ್ಯರಿಗೆ ಮಿಸ್ರಿ ಅವರು ಅಗತ್ಯ ಮಾಹಿತಿ ನೀಡುತ್ತಿದ್ದಾರೆ.
ಮೂಲಗಳ ಪ್ರಕಾರ, ಭಾರತದ ಕ್ರಮವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ತಾಣಗಳ ವಿರುದ್ಧ ನಿರ್ದೇಶಿಸಲ್ಪಟ್ಟಿತ್ತು. ಪಾಕಿಸ್ತಾನದ ಮಿಲಿಟರಿ ಮತ್ತು ನಾಗರಿಕ ಸೌಲಭ್ಯಗಳನ್ನು ಗುರಿಯಾಗಿಸಿರಲಿಲ್ಲ. ಭಾರತದ ಮಿಲಿಟರಿ ನೆಲೆಗಳು ಮತ್ತು ನಾಗರಿಕರ ಮೇಲೆ ಪಾಕಿಸ್ತಾನ ದಾಳಿಗೆ ಪ್ರಯತ್ನಿಸಿದ ನಂತರವೇ ಭಾರತವು ಪ್ರತಿದಾಳಿ ನಡೆಸಿತು ಎಂದು ಸಂಸದರು ಮತ್ತು ನಿಯೋಗದ ಇತರ ಸದಸ್ಯರಿಗೆ ಮಿಸ್ರಿ ಮಾಹಿತಿ ನೀಡಿದರು.
ಜೆಡಿಯುನ ಸಂಜಯ್ ಝಾ, ಶಿವಸೇನಾದ ಶ್ರೀಕಾಂತ್ ಶಿಂಧೆ, ಡಿಎಂಕೆಯ ಕನಿಮೊಳಿ ಅವರ ನೇತೃತ್ವದ ನಿಯೋಗದ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಕನಿಮೊಳಿ ಅವರು ಸಭೆಯಲ್ಲಿ ಭಾಗವಹಿಸಿರಲಿಲ್ಲ.
ತಮ್ಮ ಸಂಸದ ಯೂಸುಫ್ ಪಠಾಣ್ ಅವರನ್ನು ಆಯ್ಕೆ ಮಾಡಿದ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ಟಿಎಂಸಿ ಪ್ರತಿಭಟಿಸಿದ ನಂತರ ಕೊನೆಯ ಗಳಿಗೆಯಲ್ಲಿ ನಿಯೋಗಕ್ಕೆ ಸೇರ್ಪಡೆಯಾದ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ಬ್ಯಾನರ್ಜಿ ಅವರು ಝಾ ನೇತೃತ್ವದ ನಿಯೋಗದಲ್ಲಿದ್ದಾರೆ.
ಝಾ ಅವರು ಜಪಾನ್, ಸಿಂಗಪುರ, ದಕ್ಷಿಣ ಕೊರಿಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾಗಳಿಗೆ ಭೇಟಿ ನೀಡಲಿರುವ ನಿಯೋಗವನ್ನು ಮುನ್ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.