ADVERTISEMENT

ಬಾಂಧವ್ಯ ವೃದ್ಧಿಸುವ ಸವಾಲು

ಪಿಟಿಐ
Published 31 ಮೇ 2019, 19:45 IST
Last Updated 31 ಮೇ 2019, 19:45 IST
ಎಸ್‌. ಜೈಶಂಕರ್‌
ಎಸ್‌. ಜೈಶಂಕರ್‌   

ನವದೆಹಲಿ: ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಎಸ್‌. ಜೈಶಂಕರ್ ಶುಕ್ರವಾರ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ರಾಯಭಾರಿ ಮತ್ತು ವಿದೇಶಾಂಗ ಕಾರ್ಯದರ್ಶಿಯಾಗಿದ್ದ ವ್ಯಕ್ತಿಯೊಬ್ಬರು ಸಚಿವಾಲಯದ ಹೊಣೆ ಹೊತ್ತುಕೊಂಡ ಅಪರೂಪದ ಬೆಳವಣಿಗೆ ಇದು.

ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವರು ಸೇವೆಯಿಂದ ನಿವೃತ್ತರಾದ 16 ತಿಂಗಳ ಬಳಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸದ್ಯ ಅವರು ಸಂಸತ್ತಿನ ಯಾವುದೇ ಸದನದ ಸದಸ್ಯರಲ್ಲ.

ಚೀನಾ ಮತ್ತು ಅಮೆರಿಕದ ಬೆಳವಣಿಗೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಜೈಶಂಕರ್‌, ವಿದೇಶಾಂಗ ವ್ಯವಹಾರಗಳಲ್ಲಿ ಮುಖ್ಯವಾಗಿ ಪಾಕಿಸ್ತಾನ ಜೊತೆಗಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಎಂಥ ತೀರ್ಮಾನಗಳನ್ನು ತೆಗೆದುಕೊಳ್ಳುವರು ಎಂಬ ಕುತೂಹಲ ಮೂಡಿದೆ.

ADVERTISEMENT

ವಿದೇಶಾಂಗ ವ್ಯವಹಾರದ ಬಹುಪಕ್ಷೀಯ ವೇದಿಕೆಗಳಾದ ಜಿ–20, ಶಾಂಘೈ ಸಹಕಾರ ಸಂಘಟನೆ ಮತ್ತು ಬ್ರಿಕ್ಸ್‌ನಲ್ಲಿ ಭಾರತದ ಪ್ರಭಾವವನ್ನು ವೃದ್ಧಿಸುವ ಹೊಣೆಯೂ ಜೈಶಂಕರ್‌ ಅವರ ಮೇಲಿದೆ. ಇವರ ನೇತೃತ್ವದಲ್ಲಿ ಸಚಿವಾಲಯವು ಅಮೆರಿಕ, ರಷ್ಯಾ, ಫ್ರಾನ್ಸ್‌, ಜಪಾನ್‌ ಮತ್ತು ಯೂರೋಪ್‌ ಒಕ್ಕೂಟದ ಜೊತೆಗೆ ವ್ಯಾಪಾರ ಮತ್ತು ರಕ್ಷಣಾ ಒಪ್ಪಂದಗಳನ್ನು ಉತ್ತಮಪಡಿಸಲು ಒತ್ತು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

2017ರ ಮಧ್ಯಭಾಗದಲ್ಲಿ ದೊಕಾಲಾ ಗಡಿಯಲ್ಲಿ ನಡೆದ ಅಹಿತಕರ ಬೆಳವಣಿಗೆಗಳ ಬಳಿಕ ಕೆಟ್ಟು ಹೋಗಿರುವ ಚೀನಾ ಜೊತೆಗಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಅವರ ಮುಂದಿರುವ ದೊಡ್ಡ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.