ADVERTISEMENT

ತಿಹಾರ್‌ ಜೈಲಿನಲ್ಲಿ ಡಿಕೆಶಿ ಭೇಟಿ ಮಾಡಿದ ಮಾಜಿ ಸಿಎಂ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 6:18 IST
Last Updated 21 ಅಕ್ಟೋಬರ್ 2019, 6:18 IST
   

ದೆಹಲಿ: ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಯಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಇಂದು ತಿಹಾರ್‌ ಜೈಲಿನಲ್ಲಿ ಭೇಟಿಯಾದರು.

ಸೋಮವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ ಎಚ್‌ಡಿಕೆ, ತಿಹಾರ್‌ ಜೈಲಿಗೆ ತೆರಳಿದರು. ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ರಾಜಕೀಯ ಬೇರೆ, ವೈಯಕ್ತಿಕ ವಿಚಾರಗಳೇ ಬೇರೆ. ಇದು ನನ್ನ ಖಾಸಗಿ ಭೇಟಿ. ಡಿಕೆಶಿ ಮೇಲೆ ರಾಜಕೀಯದ ಪ್ರತಿಕಾರ ನಡೆಯುತ್ತಿದೆ. ಅವರಿಗೆ ಆತ್ಮಸ್ಥೈರ್ಯ ತುಂಬಲು, ವಿಶ್ವಾಸ ಮೂಡಿಸಲು ನಾನಿಂದು ಇಲ್ಲಿಗೆ ಬಂದಿದ್ದೇನೆ. ಅವರು ಮಾನಸಿಕವಾಗಿ ಬಲಿಷ್ಠರಿದ್ದಾರೆ. ಎಲ್ಲವನ್ನೂ ಎದುರಿಸುತ್ತಾರೆ,’ ಎಂದು ಎಚ್ಡಿಕೆ ಹೇಳಿದರು.

ಡಿಕೆಶಿ ಭೇಟಿಯಾಗಲು ದೆಹಲಿಗೆ ಬಂದ ಎಚ್ಡಿಕೆ ಅವರೊಂದಿಗೆ ಸಂಸದ ಡಿ.ಕೆ ಸುರೇಶ್‌, ಮಾಜಿ ಸಚಿವ ಪುಟ್ಟರಾಜು, ಸಾ.ರಾ ಮಹೇಶ್‌ ಸೇರಿದಂತೆ ಹಲವರಿದ್ದರು.

ADVERTISEMENT

ಡಿ.ಕೆ ಶಿವಕುಮಾರ್‌ ಅವರು ಬಂಧನಕ್ಕೀಡಾದಾಗ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಒಕ್ಕಲಿಗ ಒಕ್ಕೂಟಗಳು ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದವು. ವಿರೋಧ ಪಕ್ಷಗಳ ಒಕ್ಕಲಿಗ ನಾಯಕರು, ಪ್ರಮುಖರು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಈ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದ ಎಚ್‌.ಡಿ ಕುಮಾರಸ್ವಾಮಿ ಟೀಕೆಗಳನ್ನೂ ಎದುರಿಸಿದ್ದರು.

ಇದರ ಜತೆಗೇ ಡಿ.ಕೆ ಶಿವಕುಮಾರ್‌ ಜೈಲು ಸೇರಿರುವ ಬಗ್ಗೆ ಕುಮಾರಸ್ವಾಮಿ ಅವರು ಲಘುವಾಗಿ ಮಾತನಾಡಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದ್ದವು.

ಸೋನಿಯಾ ಭೇಟಿ ಸಾಧ್ಯತೆ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಇಂದು ತಿಹಾರ್‌ ಜೈಲಿನಲ್ಲಿ ಡಿ.ಕೆ ಶಿವಕುಮಾರ್‌ ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಈ ಮೂಲಕ ‘ನಾವು ನಿಮ್ಮೊಂದಿಗಿದ್ದೇವೆ’ ಎಂಬ ಸಂದೇಶ ರವಾನಿಸಲು ಎಐಸಿಸಿ ನಿರ್ಧರಿಸಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.