ADVERTISEMENT

ನೋಟು ರದ್ದತಿಗೆ 4 ವರ್ಷ: ಕಾಂಗ್ರೆಸ್, ಬಿಜೆಪಿ ವಾಕ್ಸಮರ

ಏಜೆನ್ಸೀಸ್
Published 9 ನವೆಂಬರ್ 2020, 6:09 IST
Last Updated 9 ನವೆಂಬರ್ 2020, 6:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ₹500 ಮತ್ತು ₹1,000 ಮುಖಬೆಲೆ ನೋಟುಗಳ ರದ್ದು ನಿರ್ಧಾರ ಪ್ರಕಟಿಸಿ ಭಾನುವಾರಕ್ಕೆ 4 ವರ್ಷಗಳು ಪೂರ್ಣಗೊಂಡಿವೆ. 2016ರ ನವೆಂಬರ್‌ 8ರಂದು ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ನೋಟು ರದ್ದು ನಿರ್ಧಾರ ಪ್ರಕಟಿಸಿದ್ದರು.

ನೋಟು ರದ್ದು ನಿರ್ಧಾರಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. 4 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಆಡಳಿತಾರೂಢ ಬಿಜೆಪಿ ನಾಯಕರು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಆರ್ಥಿಕತೆಗೆ ಹೊಡೆತ ಎಂದ ರಾಹುಲ್: ‘ನೋಟು ರದ್ದತಿಯಿಂದ ಪ್ರಧಾನಿಯವರ ಆಪ್ತ ಬಂಡವಾಳಶಾಹಿ ಸ್ನೇಹಿತರಿಗಷ್ಟೇ ಲಾಭವಾಗಿದ್ದು, ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ’ ಎಂದು ಸಂಸದ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ADVERTISEMENT

ಪಕ್ಷದ ಆನ್‌ಲೈನ್‌ ಅಭಿಯಾನದ ಭಾಗವಾಗಿ #SpeakUpAgainstDeMoDisaster ಶೀರ್ಷಿಕೆಯಡಿ ವಿಡಿಯೊ ಬಿಡುಗಡೆ ಮಾಡಿರುವ ಅವರು, ‘ಒಂದು ಕಾಲದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದ್ದ ಭಾರತದ ವೃದ್ಧಿ ದರವನ್ನು ಬಾಂಗ್ಲಾದೇಶ ಮೀರಿಸಲು ಕಾರಣವೇನು’ ಎಂದು ಪ್ರಶ್ನಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿಗೆ ಸರ್ಕಾರ ಕೋವಿಡ್‌ ಕಾರಣವನ್ನು ನೀಡುತ್ತಿದೆ. ಬಾಂಗ್ಲಾದೇಶ ಸೇರಿದಂತೆ ವಿಶ್ವದ ಇತರೆಡೆಗಳಲ್ಲೂ ಕೋವಿಡ್‌ ಇದೆ. ಸೋಂಕಿನಿಂದ ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿಲ್ಲ. ಬದಲಾಗಿ, ನೋಟು ರದ್ದತಿ ಮತ್ತು ಜಿಎಸ್‌ಟಿ ಇದಕ್ಕೆ ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ನೋಟು ರದ್ದತಿ ಮಾಡಲಾಯಿತು. ಈ ನಿರ್ಧಾರದಿಂದ ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳು ನಾಶವಾಗಿದ್ದಾರೆ. ಹಣದುಬ್ಬರದ ಕಾರಣ ಗ್ರಾಮೀಣ ಆರ್ಥಿಕತೆಯು ಸಂಪೂರ್ಣವಾಗಿ ಕುಸಿದುಹೋಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸಮರ್ಥನೆ: ಬಿಜೆಪಿಯು ನೋಟು ರದ್ದತಿಯನ್ನು ಸಮರ್ಥಿಸಿಕೊಂಡಿದ್ದು, ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಕಳೆದುಹೋದ ದಶಕದಲ್ಲಿ ನಡೆಸಿದ ಭ್ರಷ್ಟಾಚಾರ ಮತ್ತು ಕಪ್ಪು ಹಣದ ಮೇಲಿನ ದಾಳಿಯೇ ನೋಟು ರದ್ದತಿ ಎಂದು ಹೇಳಿದೆ.

‘ನೋಟು ರದ್ದತಿಯಿಂದ ಆರ್ಥಿಕತೆಯನ್ನು ಸ್ವಚ್ಛಗೊಳಿಸಲಾಗಿದೆ. ಅನೌಪಚಾರಿಕ ಆರ್ಥಿಕ ವಲಯ ಒಟ್ಟುಗೂಡಿಸುವ ಮೂಲಕ ಔಪಚಾರಿಕ ಆರ್ಥಿಕತೆಯನ್ನು ಉತ್ತೇಜಿಸಿದೆ. ಮತ್ತು ಸಮಾಜದ ಎಲ್ಲಾ ವರ್ಗದವರಿಗೆ ಅಭೂತಪೂರ್ವ ಆರ್ಥಿಕ ಉತ್ತೇಜನಗಳನ್ನು ನೀಡಿದೆ. ಜೊತೆಗೆ, ಆದಾಯ ಗಳಿಕೆಗೆ ಅನುಕೂಲವಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್ ಚಂದ್ರಶೇಖರ್‌ ಪ್ರತಿಪಾದಿಸಿದ್ದಾರೆ.

ನವೆಂಬರ್ 8ರ ಆ ರಾತ್ರಿ ಹಾಗೂ ಮುಂದಿನ ದಿನಗಳು...

2016ರ ನವೆಂಬರ್ 8ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಟಿವಿ ಮಾಧ್ಯಮದ ಮೂಲಕ ಮಾತನಾಡಿದ ಪ್ರಧಾನಿ ಮೋದಿಯವರು, ₹500 ಹಾಗೂ ₹1000 ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರ ಪ್ರಕಟಿಸಿದ್ದರು. ಆ ನೋಟುಗಳ ಬದಲಿಗೆ ₹500ರ ಹೊಸ ನೋಟುಗಳು ಹಾಗೂ ₹ 2000 ಮೌಲ್ಯದ ನೋಟುಗಳನ್ನು ಚಲಾವಣೆಗೆ ತರುವುದಾಗಿ ತಿಳಿಸಿದ್ದರು. ಭಯೋತ್ಪಾದನೆಗೆ ಅಗತ್ಯ ಹಣಕಾಸು ಪೂರೈಕೆಗಾಗಿ ನಕಲಿ ನೋಟುಗಳ ಬಳಕೆ ಇದೆ ಎನ್ನಲಾಗಿದ್ದು, ಅದನ್ನು ಮಟ್ಟಹಾಕಲು ಹಾಗೂ ಕಪ್ಪುಹಣದ ಸಮಸ್ಯೆ ಬಗೆಹರಿಸಲು ಈ ನಿರ್ಧಾರ ಕೈಗೊಂಡಿದ್ದಾಗಿ ಪ್ರಧಾನಿ ತಿಳಿಸಿದ್ದರು.

ಪರಿಣಾಮವಾಗಿ ಮರುದಿನದಿಂದ ನಾಗರಿಕರು ಹಣ ಪಡೆಯಲು ಹಾಗೂ ಜಮಾ ಮಾಡಲು ಬ್ಯಾಂಕ್‌ಗಳ ಹೊರಗೆ ಉದ್ದದ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಯಿತು. ಅಂಚೆ ಕಚೇರಿಗಳು ಹಾಗೂ ಎಟಿಎಂಗಳ ಎದುರೂ ಸರತಿ ಸಾಲುಗಳು ಕಂಡವು. ದಿಢೀರನೆ ಅಷ್ಟೊಂದು ಜನ ಸಾಲುಗಟ್ಟಿ ನಿಂತಿದ್ದರಿಂದ ₹10, ₹20, ₹50 ಹಾಗೂ ₹100ರ ಮುಖಬೆಲೆಯ ನೋಟುಗಳಿಗೆ ಬೇಡಿಕೆ ಅಧಿಕವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.