ADVERTISEMENT

ಪಾಕ್‌ ಪೈಲಟ್‌ಗಳ ರಫೇಲ್‌ ಹಾರಾಟ ತರಬೇತಿ ಕುರಿತ ವರದಿ ಸುಳ್ಳು ಎಂದ ಫ್ರಾನ್ಸ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 9:11 IST
Last Updated 11 ಏಪ್ರಿಲ್ 2019, 9:11 IST
   

ನವದೆಹಲಿ: ಪಾಕಿಸ್ತಾನ ವಾಯು ಸೇನೆಯ ಪೈಲಟ್‌ಗಳು 2017ರಲ್ಲಿ ರಫೇಲ್‌ ಯುದ್ಧ ವಿಮಾನ ಹಾರಾಟ ತರಬೇತಿ ಪಡೆದಿದ್ದಾರೆ ಎಂಬ ಮಾಧ್ಯಮ ವರದಿಗಳು ಸುಳ್ಳು ಎಂದು ಭಾರತದಲ್ಲಿರುವ ಫ್ರಾನ್ಸ್‌ ರಾಯಭಾರಿ ತಿಳಿಸಿದ್ದಾರೆ.

ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಸಂಸ್ಥೆಯು 2019ರ ಫೆ.6ರಂದು ಕತಾರ್‌ಗೆ ರಫೇಲ್‌ ಯುದ್ಧ ವಿಮಾನಗಳನ್ನು ಪೂರೈಸಿದ್ದು, ಇದಕ್ಕೂ ಮೊದಲು 2017ರಲ್ಲಿ ಕತಾರ್‌ನ ವಾಯುಸೇನೆಯ ತಂಡಕ್ಕೆ ನೀಡಿದ ರಫೇಲ್‌ ಹಾರಾಟ ತರಬೇತಿಯಲ್ಲಿ ಪಾಕಿಸ್ತಾನಿ ಪೈಲಟ್‌ಗಳು (ಎಕ್ಸ್‌ಚೇಂಜಿಂಗ್‌ ಆಫಿಸರ್‌ಗಳು) ತರಬೇತಿ ಪಡೆದಿದ್ದಾರೆ ಎಂದುವೈಮಾನಿಕ ಕ್ಷೇತ್ರದ ಕುರಿತಷ್ಟೇ ವರದಿಗಳನ್ನು ಪ್ರಕಟಿಸುವ ಅಂತಾರಾಷ್ಟ್ರೀಯ ಮಟ್ಟದ ಆನ್‌ಲೈನ್‌ ಸುದ್ದಿ ಸಂಸ್ಥೆ ainonline.com ಫೆ.13ರಂದು ವರದಿಯೊಂದನ್ನು ಪ್ರಕಟಿಸಿತ್ತು.

ಇದರ ಆಧಾರದಲ್ಲೇ ಗುರುವಾರ ಭಾರತದಲ್ಲಿಯೂ ವರದಿಗಳು ಪ್ರಕಟವಾಗಿದ್ದವು. ಆದರೆ, ಈ ಬಗ್ಗೆ ಇಂದು ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಭಾರತದಲ್ಲಿರುವ ಫ್ರಾನ್ಸ್‌ನ ರಾಯಭಾರಿ ಅಲೆಕ್ಸಾಂಡರ್‌ ಕ್ಸೈಲರ್‌ ‘ಇಂದೊಂದು ಸುಳ್ಳು ಸುದ್ದಿ,’ ಎಂದಿದ್ದಾರೆ. ಇದರೊಂದಿಗೆ ಪಾಕ್‌ ವಾಯುಸೇನೆಯ ಪೈಲಟ್‌ಗಳಿಗೆ ರಫೇಲ್‌ ಹಾರಾಟ ತರಬೇತಿ ಸಿಕ್ಕಿದೆ ಎಂಬುದನ್ನು ಅವರು ತಳ್ಳಿ ಹಾಕಿದ್ದಾರೆ.

ADVERTISEMENT

ವರದಿ ಕುರಿತುಮೊದಲೇ ಪ್ರತಿಕ್ರಿಯೆ ನೀಡಿರುವ ಡಸಾಲ್ಟ್‌ ಏವಿಯೇಷನ್ಸ್‌ನ ಭಾರತೀಯ ಕಾರ್ಯನಿರ್ವಾಹಕರು, ‘ಈ ಬಗ್ಗೆ ನಮಗೆ ಏನೂ ತಿಳಿದಿಲ್ಲ. ನಮಗೆ ಯಾವುದೇ ಮಾಹಿತಿಯೂ ಇಲ್ಲ,’ ಎಂದು ಹೇಳಿದ್ದಾಗಿ ರಾಷ್ಟ್ರೀಯ ಆಂಗ್ಲ ವಾಹಿನಿ ಎನ್‌ಡಿಟಿವಿ ತನ್ನ ವೆಬ್‌ಸೈಟ್‌ನಲ್ಲಿ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.