ADVERTISEMENT

ಸಂಪರ್ಕಕ್ಕೆ ಸಿಗದ ವಿಜಯ್ ಮಲ್ಯ: ಸುಪ್ರೀಂ ಕೋರ್ಟ್‌ಗೆ ವಕೀಲರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 16:14 IST
Last Updated 3 ನವೆಂಬರ್ 2022, 16:14 IST
ವಿಜಯ್‌ ಮಲ್ಯ
ವಿಜಯ್‌ ಮಲ್ಯ   

ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಅವರು ಕೆಲ ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಮತ್ತು ಪ್ರತಿಕ್ರಿಯಿಸುತ್ತಿಲ್ಲ. ಯಾವುದೇ ಸೂಚನೆಗಳನ್ನು ನೀಡಲು ಆಗುತ್ತಿಲ್ಲ ಎಂದು ಅವರ ಪರ ವಕೀಲರು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಮಲ್ಯ ಪರ ವಕಾಲತ್ತು ವಹಿಸುವ ಜವಾಬ್ದಾರಿಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಲಯಕ್ಕೆ ವಕೀಲರು ಮನವಿ ಮಾಡಿದರು.

‘ಮಲ್ಯ ಬಹಳ ಸಮಯದಿಂದ ಸಂವಹನ ನಡೆಸುತ್ತಿಲ್ಲ. ಬಾಕಿ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಅವರಿಂದ ಯಾವುದೇ ಸೂಚನೆಗಳಿಲ್ಲ’ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ನ್ಯಾಯಪೀಠಕ್ಕೆ ವಕೀಲರು ಹೇಳಿದರು.

ADVERTISEMENT

ಬ್ರಿಟನ್‌ನಲ್ಲಿರುವ ಮಲ್ಯ ಅವರ ಇ–ಮೇಲ್ ಮತ್ತು ವಸತಿ ವಿಳಾಸವನ್ನು ನ್ಯಾಯಾಲಯದ ರಿಜಿಸ್ಟ್ರರ್‌ಗೆ ಒದಗಿಸುವಂತೆ ಪೀಠ ವಕೀಲರಿಗೆ ಹೇಳಿದೆ.

ನ್ಯಾಯಾಲಯದ ನಿರ್ಬಂಧದ ಆದೇಶ ಹೊರತಾಗಿಯೂ ಅವರ ಮೂವರು ಮಕ್ಕಳ ಖಾತೆಗಳಿಗೆ 40 ಮಿಲಿಯನ್ ಯುಎಸ್‌ಡಿ ವರ್ಗಾವಣೆಗೆ ಸಂಬಂಧಿಸಿದ 2017ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಲ್ಯ ಅವರ ಗೈರು ಹಾಜರಿಯಲ್ಲಿ ₹2,000 ದಂಡದೊಂದಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಶಿಕ್ಷೆಗೆ ಒಳಗಾಗಲು ಪ್ರಸ್ತುತ ಬ್ರಿಟನ್‌ನಲ್ಲಿ ನೆಲೆಸಿರುವ ಮಲ್ಯ ಅವರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.

ಮಲ್ಯ ಹಸ್ತಾಂತರಕ್ಕಾಗಿ ಭಾರತದ ಮನವಿಯನ್ನು ಬ್ರಿಟನ್ ನ್ಯಾಯಾಲಯ ಅಂಗೀಕರಿಸಿದೆ. ಆದರೆ, ಅಲ್ಲಿಯ ಕೆಲ ವಿಚಾರಣೆಗಳು ಅಂತಿಮ ಪ್ರಕ್ರಿಯೆಯನ್ನು ವಿಳಂಬಗೊಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.