ಹೈದರಾಬಾದ್: ತೆಲಂಗಾಣದಲ್ಲಿ ವಿವಿಧ ಪ್ರವಾಸಿ ತಾಣಗಳನ್ನು ಸುತ್ತಾಡಿರುವ 2025ರ ವಿಶ್ವ ಸುಂದರಿ ಸ್ಪರ್ಧಿಗಳು ಶನಿವಾರ ಮೋಜು ಮಸ್ತಿಯಲ್ಲಿ ತಲ್ಲೀನರಾಗಿದ್ದರು. ಇದರಿಂದಾಗಿ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು.
ಸ್ಪರ್ಧಿಗಳು ಬ್ಯಾಡ್ಮಿಂಟನ್, ಚೆಸ್ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಆಡಿದರು. ಕೆಲ ಹೊತ್ತು ಯೋಗಾಭ್ಯಾಸ ಮಾಡಿದರು. ಅಲ್ಲದೆ, ನೃತ್ಯ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ರಂಜಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ‘ಇಲ್ಲಿ ನಡೆದ ಕ್ರೀಡಾ ದಿನದಲ್ಲಿ ವಿಶ್ವ ಸುಂದರಿ ಸ್ಪರ್ಧಿಗಳು ವಿಶಿಷ್ಟವಾದ ಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಯುವ ಸಮುದಾಯವು ಆರೋಗ್ಯವಂತರಾಗಿರಬೇಕು ಎಂಬ ಸಂದೇಶ ರವಾನಿಸಿದರು’ ಎಂದು ಹೇಳಿದರು.
ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತೆಲಂಗಾಣ ಪ್ರವಾಸೋದ್ಯಮ ಸಚಿವ ಜೂಪಲ್ಲಿ ಕೃಷ್ಣರಾವ್, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ವಿಶ್ವ ಸುಂದರಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಜೂಲಿಯಾ ಮೊರ್ಲಿ ಪಾಲ್ಗೊಂಡರು.
ಇಸ್ರೇಲ್ ಧ್ವಜ ತೆಗೆದ ಪ್ರಕರಣ: ಆರೋಪಿ ಬಂಧನ
ಹೈದರಾಬಾದ್: ವಿಶ್ವ ಸುಂದರಿ ಸ್ಪರ್ಧೆ ನಡೆಯುತ್ತಿರುವ ಕಾರಣಕ್ಕೆ ತೆಲಂಗಾಣದ ಆಡಳಿತ ಕಚೇರಿ ಬಳಿ ಅಳವಡಿಸಲಾಗಿದ್ದ ಇಸ್ರೇಲ್ ಧ್ವಜವನ್ನು ತೆರವುಗೊಳಿಸಿದ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಇದೊಂದೇ ವಾರದಲ್ಲಿ ಇಸ್ರೇಲ್ ಧ್ವಜವನ್ನು ಎರಡು ಬಾರಿ ತೆರವುಗೊಳಿಸಲಾಗಿತ್ತು. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲಿಗೆ ಮೇ 12ರಂದು ಧ್ವಜ ತೆಗೆದು ಹಾಕಲಾಗಿದೆ ಎಂಬ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ಆ ಬಳಿಕ ಅದೇ ಸ್ಥಳದಲ್ಲಿ ಇಸ್ರೇಲ್ ದೇಶದ ಧ್ವಜವನ್ನು ಹಾಕಲಾಯಿತು. ಆದರೆ ಮೇ 14ರಂದು ಮತ್ತೆ ಇಸ್ರೇಲ್ ಧ್ವಜವನ್ನು ತೆಗೆದು ಹಾಕಲಾಗಿದ್ದು ಈ ಬಗ್ಗೆ ಮೇ 16ರಂದು ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮೇ 16ರ ಪ್ರಕರಣದಲ್ಲಿ ಝಾಕೀರ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ತಾನು ಧ್ವಜವನ್ನು ತೆಗೆದುಹಾಕುತ್ತಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಎಂಬುದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.