ಗಾಂಧಿ ಪ್ರತಿಮೆ (ಸಾಂದರ್ಭಿಕ ಚಿತ್ರ)
ಮುಂಬೈ: ಮಾನಸಿಕ ಅಸ್ವಸ್ಥ ಎನ್ನಲಾದ 35 ವರ್ಷದ ವ್ಯಕ್ತಿಯೊಬ್ಬ ಪುಣೆ ರೈಲು ನಿಲ್ದಾಣದ ಹೊರಗಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಧ್ವಂಸ ಮಾಡಲು ಮಾಡಲು ಯತ್ನಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಆರೋಪಿಯನ್ನು ಸೂರಜ್ ಶುಕ್ಲಾ ಎಂದು ಗುರುತಿಸಲಾಗಿದೆ. ಈತ ಮೂಲತಃ ಉತ್ತರ ಪ್ರದೇಶದವನಾಗಿದ್ದು, ಪುಣೆಯ ವಿಶ್ರಾಂತವಾಡಿಯಲ್ಲಿ ನೆಲಸಿದ್ದಾನೆ. ರುದ್ರಾಕ್ಷಿ, ಪ್ರಾರ್ಥನಾ ಮಣಿಗಳು ಮತ್ತು ಧಾರ್ಮಿಕ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ.
ಕತ್ತಿಯಂತಹ ವಸ್ತುವನ್ನು ಹಿಡಿದು ಪ್ರತಿಮೆಗೆ ಹಾನಿ ಮಾಡಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ತಡೆದು, ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.
‘ಆರೋಪಿಯ ಸಹೋದರಿಯು ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರು. ಅನಂತರ ಆರೋಪಿಯು ಮಾನಸಿಕವಾಗಿ ವಿಚಲಿತನಾಗಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ’ ಎಂದು ಉಪ ಪೊಲೀಸ್ ಆಯುಕ್ತ ದಿಲೀಪ್ ಮೋಹಿತೆ ಅವರು ತಿಳಿಸಿದರು.
ಶುಕ್ಲಾ ಬಲಪಂಥೀಯ ಸಂಘಟನೆಗಳ ಜೊತೆ ನಂಟು ಹೊಂದಿದ್ದ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.