ADVERTISEMENT

ಗಂಗೆಯಲ್ಲಿ ಬ್ಯಾಕ್ಟೀರಿಯಾ ಮಟ್ಟ ಹೆಚ್ಚಳ

ಸಾಂಕ್ರಾಮಿಕ ರೋಗ ಹರಡುವ ಭೀತಿ

ಪಿಟಿಐ
Published 25 ಮೇ 2019, 19:45 IST
Last Updated 25 ಮೇ 2019, 19:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಗಂಗಾನದಿ ಸೇರುವ ಫೀಕಲ್‌ ಕೋಲಿಫಾರ್ಮ್‌ದ (ಎಫ್‌ಸಿ) ಇ–ಕೊಲಿ ಬ್ಯಾಕ್ಟೀರಿಯಾ ಪ್ರಮಾಣ ಅನುಮತಿಸಲ್ಪಟ್ಟ ಮಿತಿಗಿಂತ 3ರಿಂದ 12 ಪಟ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹೇಳಿದೆ.

ನದಿ ಸೇರುವ ಅಂತರರಾಜ್ಯ ತೀರ ಪ್ರದೇಶಗಳಲ್ಲಿ ಈ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದೆ.ಸಿಪಿಸಿಬಿ ಬಿಡುಗಡೆಗೊಳಿಸಿರುವ ದತ್ತಾಂಶಗಳಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಸಂಸ್ಕರಿಸದೇ ಇರುವ ನೀರು ಅಥವಾ ಕಲುಷಿತ ನೀರು ನದಿಗೆ ಸೇರ್ಪಡೆಗೊಂಡಾಗ ಮತ್ತು ಮಲದಲ್ಲಿ ಈ ಫೀಕಲ್‌ ಕೋಲಿಫಾರ್ಮ್‌ ಬ್ಯಾಕ್ಟೀರಿಯಾ ಕಂಡುಬರುತ್ತದೆ. ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳಿಗೆ ಈ ಬ್ಯಾಕ್ಟೀರಿಯಾಗಳು ಕಾರಣವಾಗುತ್ತವೆ.

ADVERTISEMENT

ಫೀಕಲ್ ಕೋಲಿಫಾರ್ಮ್ ಅನುಮತಿಸಿದ ಮಿತಿ ಪ್ರತಿ 100 ಎಂಎಲ್ ಗೆ 2,500 ಎಂಪಿಎನ್ (ಗರಿಷ್ಠ ಇರಬಹುದಾದ ಸಂಖ್ಯೆ) ಆಗಿದ್ದರೆ, ಅಪೇಕ್ಷಿತ ಮಟ್ಟ ಪ್ರತಿ 100 ಎಂಎಲ್ ಗೆ 500 ಎಂಪಿಎನ್ ಆಗಿದೆ. ಅಂದರೆ, 100 ಎಂಎಲ್‌ ನೀರಿನಲ್ಲಿ 500ರಷ್ಟು ಬ್ಯಾಕ್ಟೀರಿಯಾಗಳು ಎಂದರ್ಥ.

ಗಂಗಾನದಿಯಲ್ಲಿ ಗರಿಷ್ಠ ಎಫ್‌ಸಿ ಕಂಡು ಬಂದಿರುವುದು ಪಶ್ಚಿಮ ಬಂಗಾಳದ ಬೆರ್‌ಹಾಮ್‌ಪುರದ ಖಗ್ರಾದಲ್ಲಿ. ಇಲ್ಲಿ ಎಫ್‌ಸಿ 30,000 ಎಂಪಿಎನ್‌ ಇದೆ. ಅಂದರೆ, ಇದು ಅನುಮತಿಸಲ್ಪಟ್ಟ ಮಿತಿಗಿಂತ 12 ಪಟ್ಟು, ಅಪೇಕ್ಷಿತ ಮಿತಿಗಿಂತ 60 ಪಟ್ಟು ಹೆಚ್ಚು!

ಗಂಗಾ ನದಿ ಹರಿದು ಹೋಗುವ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ,‍ಪಶ್ಚಿಮ ಬಂಗಾಳದ ತೀರ ಪ್ರದೇಶದಲ್ಲಿನ ಎಫ್‌ಸಿ ಮಟ್ಟದ ದತ್ತಾಂಶಗಳನ್ನು ಸಿಪಿಸಿಬಿ ಬಿಡುಗಡೆಗೊಳಿಸಿದೆ. ಜಾರ್ಖಂಡ್‌ನ ಎರಡು ಗಡಿ ಪ್ರದೇಶದ ದತ್ತಾಂಶಗಳನ್ನು ನೀಡಿಲ್ಲ.

ಈ ದತ್ತಾಂಶಗಳ ಪ್ರಕಾರ, ಉತ್ತರಪ್ರದೇಶದ ಬಿಜನೋರ್‌ ಮತ್ತು ಉತ್ತರಾಖಂಡದ ಸುಲ್ತಾನಪುರ ಪ್ರದೇಶದಲ್ಲಿ ಮಾತ್ರ ಎಫ್‌ಸಿ ಮಟ್ಟ ಅನುಮತಿಸಲ್ಪಟ್ಟ ಮಿತಿಗಿಂತ ಕಡಿಮೆ ಇದೆ.

ರಾಜ್ಯದಿಂದ ರಾಜ್ಯದ ನಡುವೆ ಗಂಗಾನದಿ ಸೇರುವ ಪ್ರದೇಶಗಳಲ್ಲಿ ನೀರಿನ ಗುಣಮಟ್ಟದ ಕುರಿತು ದತ್ತಾಂಶ ಬಿಡುಗಡೆಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸಿಪಿಸಿಬಿಗೆ ಸೂಚನೆ ನೀಡಿತ್ತು.

**

ಮುಖ್ಯಾಂಶಗಳು

ಪಶ್ಚಿಮ ಬಂಗಾಳದಲ್ಲಿ ಗಂಗೆ ಅತಿ ಹೆಚ್ಚು ಮಲಿನ

ಅಪೇಕ್ಷಿತ ಮಿತಿಗಿಂತ 60 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ

ಗಂಗೆಯ ಎರಡು ತೀರ ಪ್ರದೇಶ ಮಾತ್ರ ಸುರಕ್ಷಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.