ADVERTISEMENT

ಕೊರೊನಾ ವೈರಸ್ ‘ಡೆಲ್ಟಾ ರೂಪಾಂತರ’ ಅತ್ಯಂತ ಅಪಾಯಕಾರಿ: ವರದಿ

ಪಿಟಿಐ
Published 8 ಜೂನ್ 2021, 13:30 IST
Last Updated 8 ಜೂನ್ 2021, 13:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ -19 ‘ಡೆಲ್ಟಾ ರೂಪಾಂತರ’ ವೈರಸ್ ಅತ್ಯಂತ ಅಪಾಯಕಾರಿ ಎಂದು ವರದಿಯೊಂದರಲ್ಲಿ ಹೇಳಲಾಗಿದೆ.

ಕೋವಿಡ್ ಸೋಂಕಿತರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳದ ಸಮಸ್ಯೆಗಳಾದ ಶ್ರವಣದೋಷ, ಗ್ಯಾಸ್ಟ್ರಿಕ್, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಇದರ ಪರಿಣಾಮದಿಂದ ಗ್ಯಾಂಗ್ರೀನ್ ‘ಡೆಲ್ಟಾ ರೂಪಾಂತರ’ ವೈರಸ್ ತಗುಲಿದ ಕೆಲವರಲ್ಲಿ ಕಂಡುಬಂದಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ‘ಬ್ಲೂಮ್‌ಬರ್ಗ್’ ವರದಿ ಮಾಡಿದೆ.

ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನಲ್ಲಿಯೂ ಈ ರೂಪಾಂತರ ಹೆಚ್ಚು ಅಪಾಯ ತಂದೊಡ್ಡುತ್ತಿರುವ ಬಗ್ಗೆ ವರದಿಯಾಗಿದೆ. ಈ ವೈರಸ್ ತಗುಲಿದವರು ಆಸ್ಪತ್ರೆಗೆ ದಾಖಲಾಗಬೇಕಾದ ಸಂದರ್ಭ ಹೆಚ್ಚು ಒದಗಿಬರುತ್ತಿದೆ ಎನ್ನಲಾಗಿದೆ.

ಡೆಲ್ಟಾ (B.1.617.2) ರೂಪಾಂತರ ಕಳೆದ 6 ತಿಂಗಳುಗಳಲ್ಲಿ 60ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದೆ. ಡೆಲ್ಟಾ ರೂಪಾಂತರ ವೈರಸ್‌ನಿಂದ ಉಂಟಾಗುತ್ತಿರುವ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ತಿಂಗಳ ಕೊನೆಗೆ ನಿರ್ಬಂಧಗಳನ್ನು ಸಡಿಲಿಸುವ ನಿರ್ಧಾರವನ್ನು ಬ್ರಿಟನ್‌ ಮರುಚಿಂತನೆ ಮಾಡುವಂತಾಗಿದೆ. ಸೋಂಕು ಪ್ರಸರಣ ಹೆಚ್ಚುತ್ತಿರುವುದು ಮತ್ತು ಲಸಿಕೆಗಳ ಪರಿಣಾಮಕಾರಿತ್ವದಲ್ಲಿ ಕುಸಿತವು ಡೆಲ್ಟಾ ರೂಪಾಂತರದ ಗಂಭಿರತೆಯ ಬಗ್ಗೆ ಯೋಚಿಸುವಂತೆ ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.

‘ಸೋಂಕಿತರಲ್ಲಿ ಕಂಡುಬಂದಿರುವ ಹೊಸದಾದ ಮತ್ತು ಗಂಭೀರ ಲಕ್ಷಣಗಳು ಡೆಲ್ಟಾ ರೂಪಾಂತರದ ಜತೆ ಸಂಬಂಧ ಹೊಂದಿವೆಯೇ ಎಂಬುದನ್ನು ದೃಢಪಡಿಸಲು ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳ ಅಗತ್ಯವಿದೆ ಎಂದು ಚೆನ್ನೈಯ ಅಪೊಲೊ ಆಸ್ಪತ್ರೆಯ ಸಾಂಕ್ರಾಮಿಕ ಸೋಂಕು ತಜ್ಞ ವೈದ್ಯ ಡಾ. ಅಬ್ದುಲ್ ಗಫೂರ್ ಹೇಳಿದ್ದಾರೆ.

ಸಾಂಕ್ರಾಮಿಕದ ಆರಂಭಿಕ ಅಲೆಯಲ್ಲಿ ಕಂಡುಬಂದಿರುವುದಕ್ಕಿಂತಲೂ ಈ ಬಾರಿ ಹೆಚ್ಚು ಸೋಂಕಿತರು ಭೇದಿಯಿಂದ ಬಳಲುತ್ತಿರುವುದನ್ನು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಹೊಸ ಶತ್ರು...

ನಮ್ಮ ಹೊಸ ಶತ್ರುವಿನ (ಕೊರೊನಾ ವೈರಸ್) ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗಿದೆ ಎಂದು ಕಳೆದ ವರ್ಷ ನಾವು ಭಾವಿಸಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈ ವೈರಸ್ ನಾವು ಊಹಿಸಲು ಸಾಧ್ಯವಾಗದಂತಿದೆ ಎಂದು ಗಫೂರ್ ಹೇಳಿದ್ದಾರೆ.

ಹೊಟ್ಟೆನೋವು, ವಾಕರಿಕೆ, ವಾಂತಿ, ಹಸಿವಿಲ್ಲದಿರುವುದು, ಶ್ರವಣಶಕ್ತಿ ನಾಶವಾಗುವುದು, ಗಂಟುಗಳಲ್ಲಿ ನೋವು ಸಮಸ್ಯೆಗಳು ಕೋವಿಡ್ ಸೋಂಕಿತರಲ್ಲಿ ಕಂಡುಬರುತ್ತಿದೆ ಎಂದು ಆರು ಮಂದಿ ತಜ್ಞ ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.