
ಶ್ರೀಕಾಂತ್ ಪಂಗಾರ್ಕರ್ ಮತ್ತು ಗೌರಿ ಲಂಕೇಶ್
ಮುಂಬೈ: ಜಾಲ್ನಾ ಮಹಾನಗರ ಪಾಲಿಕೆ(ಜೆಎಂಸಿ) ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಜಯ ಗಳಿಸಿದ್ದಾರೆ.
ಜೆಎಂಸಿಯ 13ನೇ ವಾರ್ಡ್‌ನಿಂದ ಶ್ರೀಕಾಂತ್ ಸ್ಪರ್ಧಿಸಿದ್ದಾರೆ. ಬಿಜೆಪಿ ಸೇರಿದಂತೆ ಇತರ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
2024ರ ವಿಧಾನಸಭಾ ಚುನಾವಣೆಗೂ ಮುನ್ನ, ಶ್ರೀಕಾಂತ್ ಶಿವಸೇನಾಗೆ ಸೇರ್ಪಡೆಗೊಂಡಿದ್ದರು. ಆದರೆ ತೀವ್ರ ಟೀಕೆ ಎದುರಾದ ಕಾರಣ ಅವರನ್ನು ಪಕ್ಷಕ್ಕೆ ಸೇರಿಸುವ ನಿರ್ಧಾರವನ್ನು ಏಕನಾಥ ಶಿಂದೆ ಅವರು ತಡೆಹಿಡಿದಿದ್ದರು.
ಜಾಲ್ನಾ ನಗರಸಭೆ ಆಗಿದ್ದ ಸಂದರ್ಭದಲ್ಲಿ ಶ್ರೀಕಾಂತ್ ಅವರು 2001ರಿಂದ 2006ರ ಸದಸ್ಯರಾಗಿದ್ದರು. ಅವರು ಅವಿಭಜಿತ ಶಿವಸೇನಾದಿಂದ ಸ್ಪರ್ಧಿಸಿದ್ದರು. 2011ರಲ್ಲಿ ಶಿವಸೇನಾ ಟಿಕೆಟ್ ನೀಡದಿದ್ದಾಗ ಹಿಂದು ಜನಜಾಗೃತಿ ಸಮಿತಿ ಸೇರಿದ್ದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಶ್ರೀಕಾಂತ್ ಅವರಿಗೆ ಕರ್ನಾಟಕ ಹೈಕೋರ್ಟ್ 2024ರ ಸೆಪ್ಟೆಂಬರ್‌ನಲ್ಲಿ ಜಾಮೀನು ನೀಡಿತ್ತು.
2018ರಲ್ಲಿ ನಲಸೋಪಾರದಲ್ಲಿ ಕಚ್ಚಾ ಬಾಂಬ್ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ, ಶ್ರೀಕಾಂತ್ ಅವರನ್ನು ಬಂಧಿಸಿ ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿಯೂ ಅವರಿಗೆ ಜಾಮೀನು ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.