ADVERTISEMENT

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಸಿ.ಎಂ ಗೆಹಲೋತ್‌ ಹೆಸರು ಮುಂಚೂಣಿ?

28ರಂದು ಚುನಾವಣಾ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 13:45 IST
Last Updated 24 ಆಗಸ್ಟ್ 2022, 13:45 IST
ಅಶೋಕ್‌ ಗೆಹಲೋತ್‌
ಅಶೋಕ್‌ ಗೆಹಲೋತ್‌   

ನವದೆಹಲಿ: ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರ ಚುನಾವಣೆ ವೇಳಾಪಟ್ಟಿ ಇದೇ 28ರಂದು ಪ್ರಕಟಿಸುವ ಸಾಧ್ಯತೆ ಇದ್ದು,ವೈದ್ಯಕೀಯ ತಪಾಸಣೆಗಾಗಿ ಲಂಡನ್‌ಗೆ ತೆರಳಿರುವ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವರ್ಚುವಲ್‌ ಮೂಲಕ ಕಾರ್ಯಕಾರಿ ಸಮಿತಿಯ ಸಭೆ ನಡೆಸಿ, ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದ್ದಾರೆ.

ಅಂದು ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಅಧ್ಯಕ್ಷತೆಯನ್ನು ಸೋನಿಯಾ ಅವರು ವರ್ಚುವಲ್‌ನಲ್ಲಿ ವಹಿಸಲಿದ್ದಾರೆ. ಅಂದು ಅಧ್ಯಕ್ಷರ ಚುನಾವಣಾ ವೇಳಾಪಟ್ಟಿಗೆ ಅನುಮೋದನೆ ಸಿಗಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಬುಧವಾರ ಟ್ವೀಟ್‌ ಮಾಡಿದ್ದಾರೆ.

ಪಕ್ಷದ ಹಿರಿಯ ನಾಯಕರೊಬ್ಬರ ಮಾಹಿತಿ ಪ್ರಕಾರ, ಅಧ್ಯಕ್ಷೀಯ ಚುನಾವಣೆ ಘೋಷಿತ ವೇಳಾಪಟ್ಟಿಯನ್ನು ಮೀರಬಹುದು. ಕೇಂದ್ರ ಚುನಾವಣಾ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದ ನಂತರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ 24 ರಿಂದ 25 ದಿನಗಳು ಬೇಕಾಗಲಿದ್ದು ಚುನಾವಣಾ ಪ್ರಕ್ರಿಯೆ ಅಕ್ಟೋಬರ್ ಮೊದಲ ವಾರ ಪೂರ್ಣವಾಗಲಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಇಬ್ಬರೂ ನಿರಾಕರಿಸುತ್ತಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರ ಹೆಸರು ಮುಂಚೂಣಿಗೆ ಬಂದಿದೆ.

ಇದೇ ವೇಳೆ ಪಕ್ಷದ ನಾಯಕರು, ರಾಹುಲ್‌ ಗಾಂಧಿಯವರು ತಮ್ಮ ನಿಲುವಿಗೆ ಅಂಟಿಕೊಂಡರೆ, 2024ರವರೆಗೂ ತಾವೇ ಹುದ್ದೆಯಲ್ಲಿ ಮುಂದುವರಿಯಬೇಕೆಂದು ಸೋನಿಯಾ ಅವರಿಗೆ ಮನವಿ ಮಾಡಿದ್ದಾರೆ. 2019ರಲ್ಲಿ ರಾಹುಲ್ ರಾಜೀನಾಮೆ ನೀಡಿದ ನಂತರ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಅವರು ಈ ಹುದ್ದೆಯಲ್ಲಿ ಮುಂದುವರಿಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಪಕ್ಷದ ಅಧ್ಯಕ್ಷ ಸ್ಥಾನ ಮರಳಿ ವಹಿಸಿಕೊಳ್ಳುವಂತೆ ರಾಹುಲ್‌ ಗಾಂಧಿಯವರಿಗೆ ಮನವಿ ಮಾಡಿರುವಗೆಹಲೋತ್‌ ಬುಧವಾರ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಉದ್ದೇಶಿಸಿದ್ದರು. ಆದರೆ, ಸೋನಿಯಾ ಜತೆಗೆ ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಲಂಡನ್‌ಗೆ ತೆರಳಿದ್ದರಿಂದ ಈ ಭೇಟಿ ಸಾಧ್ಯವಾಗಲಿಲ್ಲ.

ಅಹಮದಾಬಾದ್‌ನಿಂದ ಹಿಂದಿರುಗಿದ ಅಶೋಕ್‌ ಗೆಹಲೋತ್‌ ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು, ರಾಷ್ಟ್ರಮಟ್ಟದಲ್ಲಿ ತಮ್ಮ ಸಂಭವನೀಯ ಪಾತ್ರದ ಬಗ್ಗೆ ಕೇಳಿದಾಗ, ‘ಪಕ್ಷವು ನನಗೆ ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಗುಜರಾತ್‌ನ ಹಿರಿಯ ವೀಕ್ಷಕರ ಜವಾಬ್ದಾರಿ ನೀಡಿದೆ. ಅಧಿಕೃತವಾಗಿ ಯಾವುದೇ ನಿರ್ಧಾರ ಕೈಗೊಳ್ಳದಿದ್ದಾಗ ನಾನಾಗಲಿ ಅಥವಾ ನೀವಾಗಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ, ಈ ವಿಚಾರದಲ್ಲಿ ಮಾಧ್ಯಮ ಮುಕ್ತವಾಗಿದೆ’ ಎಂದು ಪ್ರತಿಕ್ರಿಯಿಸಿ, ತಮ್ಮ ಹೆಸರು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

ಗೆಹಲೋತ್‌ ಅವರು, ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಿಸುವ ಬಗ್ಗೆ ರಾಹುಲ್‌ ಮತ್ತು ಪ್ರಮುಖ ಮುಖಂಡರಲ್ಲಿ ಒಮ್ಮತ ಮೂಡಿದೆಯೇ ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಲಿಲ್ಲ.

ಕಾಂಗ್ರೆಸ್‌ ತೊರೆದ ಮತ್ತೊಬ್ಬ ನಾಯಕ

ನವದೆಹಲಿ (ಪಿಟಿಐ): ಕಾಂಗ್ರೆಸ್‌ ವಕ್ತಾರ ಜೈವೀರ್‌ ಶೆರ್ಗಿಲ್‌ ಬುಧವಾರ ಪಕ್ಷ ತೊರೆದಿದ್ದು, ಪಕ್ಷದೊಳಗಿನ ಭಟ್ಟಂಗಿತನ ಸಂಘಟನೆಯನ್ನು ಗೆದ್ದಲಿನಂತೆ ತಿನ್ನುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ರಾಷ್ಟ್ರೀಯ ವಕ್ತಾರ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ಶೆರ್ಗಿಲ್‌, ‘ಆಧುನಿಕ ಭಾರತ ಮತ್ತುಯುವಜನರ ಆಕಾಂಕ್ಷೆಗಳಿಗೆ ಕಾಂಗ್ರೆಸ್‌ನ ಸದ್ಯದ ನಿರ್ಣಯಕಾರರ ಸಿದ್ಧಾಂತ ಮತ್ತು ದೂರದೃಷ್ಟಿ ಹೊಂದಿಕೆಯಾಗದು. ಪಕ್ಷ ತ್ಯಜಿಸಲು ಇದೇ ಮೂಲ ಕಾರಣ’ ಎಂದು ತಿಳಿಸಿದ್ದಾರೆ.

‘ನಿರಂತರವಾಗಿ ವಾಸ್ತವಸ್ಥಿತಿ ಕಡೆಗಣನೆ, ಸ್ವಹಿತಾಸಕ್ತಿಯ ಭಟ್ಟಂಗಿತನ ಪ್ರದರ್ಶನ,ಸಾರ್ವಜನಿಕ ಮತ್ತು ದೇಶದ ಹಿತಾಸಕ್ತಿಯಿಲ್ಲದ ನಿರ್ಣಯಗಳನ್ನು ನೈತಿಕವಾಗಿ ಒಪ್ಪಿಕೊಳ್ಳಲು ಮತ್ತು ಇಂತಹವರ ಜತೆ ಕೆಲಸ ಮಾಡಲು ನನಗೆ ಸಾಧ್ಯವಿಲ್ಲ. ಇದನ್ನು ತುಂಬಾ ನೋವಿನಿಂದ ಹೇಳುತ್ತಿರುವೆ’ ಎಂದು ಶೆರ್ಗಿಲ್‌ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.