ADVERTISEMENT

ಮತದಾನ ಕೊನೆಗೊಳ್ಳುತ್ತಲೇ ಮಿತ್ರ ಪಕ್ಷವನ್ನು ಸರ್ಕಾರದಿಂದ ಹೊರ ಹಾಕಿದ ಬಿಜೆಪಿ

ಏಜೆನ್ಸೀಸ್
Published 20 ಮೇ 2019, 7:14 IST
Last Updated 20 ಮೇ 2019, 7:14 IST
   

ಲಖನೌ: ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಲೇ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಸೋಮವಾರ ತನ್ನ ಮಿತ್ರ ಪಕ್ಷ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷವನ್ನು (ಎಸ್‌ಬಿಎಸ್‌ಪಿ) ಸರ್ಕಾರದಿಂದ ಹೊರದಬ್ಬಿದೆ. ಎಸ್‌ಬಿಎಸ್‌ಪಿಯ ನಾಯಕ ಓಂ ಪ್ರಕಾಶ್‌ ರಾಜ್‌ಭರ್‌ ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮಂತ್ರಿ ಮಂಡಲದಿಂದ ವಜಾಗೊಳಿಸಿದ್ದಾರೆ.

ಇದಿಷ್ಟೇ ಅಲ್ಲದೆ,ಎಸ್‌ಬಿಎಸ್‌ಪಿಯಿಂದ ನಿಗಮ ಮಂಡಳಿಗಳಿಗೆ ಆಯ್ಕೆಯಾಗಿದ್ದ ಎಲ್ಲರನ್ನೂ ವಜಾ ಮಾಡಿ ಯೋಗಿ ಆದಿತ್ಯನಾಥ್‌ ಅವರು ಆದೇಶಿಸಿದ್ದಾರೆ.

‘ಓಂ ಪ್ರಕಾಶ್‌ ರಾಜ್‌ಭರ್‌ ಅವರನ್ನು ರಾಜ್ಯ ಹಿಂದುಳಿದ ವರ್ಗಗಳು ಮತ್ತುವಿಕಲಚೇತನರ ಕಲ್ಯಾಣ ಇಲಾಖೆಯ ಎಲ್ಲ ಜವಾಬ್ದಾರಿಗಳಿಂದಲೂ ಮುಕ್ತಗೊಳಿಸಲಾಗಿದೆ,’ ಎಂದು ಉತ್ತರ ಪ್ರದೇಶದ ರಾಜಭವನ ತಿಳಿಸಿದೆ.

ADVERTISEMENT

ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಎಸ್‌ಬಿಎಸ್‌ಪಿಯೂ 2017ರಿಂದಲೂ ಭಾಗವಾಗಿತ್ತಾದರೂ, ಬಿಜೆಪಿ ವಿರುದ್ಧ ಅಸಮಾಧಾನ ಹೊಂದಿತ್ತು. ಸೀಟು ಹಂಚಿಕೆ ಗೊಂದಲ ಎರಡೂ ಪಕ್ಷಗಳ ನಡುವಿನ ಬಿರುಕನ್ನು ದೊಡ್ಡದು ಮಾಡಿತ್ತು. ಲೋಕಸಭೆ ಚುನಾವಣೆಯಲ್ಲಿ ತಾನು ಕೇಳಿದ ಘೋಷಿ ಲೋಕಸಭಾ ಸ್ಥಾನಗಳನ್ನು ನೀಡಲಿಲ್ಲ ಎಂದು ಎಸ್‌ಬಿಎಸ್‌ಪಿಯು ಬಿಜೆಪಿ ವಿರುದ್ಧ ತೀವ್ರ ಆಕ್ರೋಶಗೊಂಡಿತ್ತು. ಇದಕ್ಕೆ ಪ್ರತಿಯಾಗಿ ರಾಜ್ಯದ39 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿಗೆ ಸಡ್ಡು ಹೊಡೆದಿತ್ತು.

ಈ ಮಧ್ಯೆ ಘೋಷಿ ಲೋಕಸಭಾ ಕ್ಷೇತ್ರದಲ್ಲಿ ಎಸ್‌ಬಿಎಸ್‌ಪಿ ಸ್ಪರ್ಧಿಸುತ್ತಿಲ್ಲ ಎಂಬ ಗಾಳಿ ಸುದ್ದಿಯು ಓಂ ಪ್ರಕಾಶ್‌ ರಾಜ್‌ಭರ್‌ ಅವರ ಕೆಣ್ಣು ಕೆಂಪಗಾಗುವಂತೆ ಮಾಡಿತ್ತು. ಈ ಗಾಳಿ ಸುದ್ದಿಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದ ರಾಜ್‌ಭರ್‌, ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ನಾಯಕರನ್ನು ಚಪ್ಪಲಿಯಲ್ಲಿ ಹೊಡೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಸಮಾರಂಭವೊಂದರಲ್ಲಿ ಹೇಳಿದ್ದರು. ಅಲ್ಲದೆ, ‘ನಾವು ಘೋಷಿ ಲೋಕಸಭೆ ಕ್ಷೇತ್ರವನ್ನು ಕೇಳಿದೆವು. ಆದರೆ, ಬಿಜೆಪಿ ಕೊಡಲಿಲ್ಲ. ಈಗ ನಾವು ಅವರ ಜತೆಗಿಲ್ಲ,’ ಎಂದು ಅವರು ಹೇಳಿದ್ದರು.

ಸೀಟು ಹಂಚಿಕೆ ಗೊಂದಲದ ಹಿನ್ನೆಲೆಯಲ್ಲಿ ರಾಜ್‌ಭರ್‌ ಏ.13ರಂದು ಮೆರವಣಿಗೆ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗೃಹ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿ ಬಂದಿದ್ದರು. ಆದರೆ, ಒಂದು ತಿಂಗಳಿಂದಲೂ ರಾಜೀನಾಮೆ ಅಂಗೀಕರಿಸದೇ ಇದ್ದ ಯೋಗಿ ಆದಿತ್ಯನಾಥ್‌ ಅವರು, ಮತದಾನ ಪ್ರಕ್ರಿಯೆ ಪೂರ್ಣಗೊಂಡ ಮರುದಿನವೇ ಎಸ್‌ಬಿಎಸ್‌ಪಿಯನ್ನು ಸರ್ಕಾರದಿಂದ ಹೊರಹಾಕಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ರಾಜ್‌ಭರ್‌, ‘ ಆದಿತ್ಯನಾಥ್‌ ನಿರ್ಧಾರಕ್ಕೆ ಸ್ವಾಗತ. ಮೈತ್ರಿಯನ್ನು ನಾನು ಒಂದು ತಿಂಗಳ ಹಿಂದೆಯೇ ತೊರೆದಿದ್ದೇನೆ. ನನ್ನನ್ನು ಯಾವ ವೇಗದಲ್ಲಿ ಹೊರ ಹಾಕಿದ್ದಾರೋ ಅದೇ ವೇಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೂ ಅವರು ಕೆಲಸ ಮಾಡಲಿ,’ ಎಂದು ರಾಜ್‌ಭರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.