ಕ್ಷತ್ರಿಯ ಮಹಾಸಭಾ
ಚಿತ್ರಕೃಪೆ:X/@Shubham952005
ಭಾಗ್ಪತ್(ಉತ್ತರ ಪ್ರದೇಶ): ಹೆಣ್ಣು ಮಕ್ಕಳ ಮದುವೆಗೆ ಚಿನ್ನ, ಬೆಳ್ಳಿ ಆಭರಣಗಳ ಬದಲಿಗೆ ಆಯುಧಗಳನ್ನು ಉಡುಗೊರೆಯಾಗಿ ನೀಡುವಂತೆ ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಅಜಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಗೌರಿಪುರ ಮಿಟ್ಲಿ ಗ್ರಾಮದಲ್ಲಿ ಭಾನುವಾರ ಠಾಕೂರ್ ಸಮುದಾಯದ ‘ಕೇಸರಿಯಾ ಮಹಾಪಂಚಾಯತ್’ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಇಂದಿನ ಬದಲಾಗುತ್ತಿರುವ ಸಮಾಜದಲ್ಲಿ ಆತ್ಮರಕ್ಷಣೆಗಾಗಿ ಹೆಣ್ಣು ಮಕ್ಕಳಿಗೆ ಆಯುಧವನ್ನು ಒದಗಿಸುವುದು ಆಭರಣಗಳನ್ನು ಉಡುಗೊರೆಯಾಗಿ ನೀಡುವುದಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ’ ಎಂದು ಹೇಳಿದ್ದಾರೆ.
ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಮದುವೆ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಚಿನ್ನ ಮತ್ತು ಬೆಳ್ಳಿಯ ಬದಲು ಕತ್ತಿ, ಕಠಾರಿ ಅಥವಾ ರಿವಾಲ್ವರ್‌ಗಳನ್ನು ಉಡುಗೊರೆಯಾಗಿ ನೀಡಬೇಕು. ರಿವಾಲ್ವರ್ ಖರೀದಿಸುವುದು ದುಬಾರಿಯಾಗಿದ್ದರೆ, ದೇಶಿ ನಿರ್ಮಿತ ಪಿಸ್ತೂಲ್ ಅನ್ನು ಕೊಡಬಹುದು’ ಎಂದಿದ್ದಾರೆ.
‘ಆಭರಣಗಳನ್ನು ಧರಿಸುವುದರಿಂದ ಅಪಾಯವೇ ಹೆಚ್ಚು. ಆದರೆ, ಶಸ್ತ್ರಾಸ್ತ್ರಗಳು ಮಹಿಳೆಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತವೆ’ ಎಂದು ಹೇಳಿದ್ದಾರೆ.
‘ಹೆಣ್ಣು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಕುಟುಂಬಗಳ ಪ್ರಾಥಮಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸಮಾಜವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಅಜಯ್ ಪ್ರತಾಪ್ ಸಿಂಗ್ ಅವರ ಹೇಳಿಕೆಯನ್ನು ಮಹಾಪಂಚಾಯತ್‌ನ ಉಳಿದ ಸದಸ್ಯರು ಬೆಂಬಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.