ADVERTISEMENT

Goa Elections 2022: ರಾಹುಲ್ ಸಮ್ಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಶಪಥ

ಪಿಟಿಐ
Published 4 ಫೆಬ್ರುವರಿ 2022, 18:12 IST
Last Updated 4 ಫೆಬ್ರುವರಿ 2022, 18:12 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಪಣಜಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಗೋವಾದ ಕಾಂಗ್ರೆಸ್ ಅಭ್ಯರ್ಥಿಗಳು ಶುಕ್ರವಾರ ಪಕ್ಷ ನಿಷ್ಠೆಯ ಶಪಥವನ್ನು ಸ್ವೀಕರಿಸಿದರು.

ಕಳೆದ ಐದು ವರ್ಷಗಳಲ್ಲಿ ಪಕ್ಷಾಂತರ ಚಟುವಟಿಕೆಗಳಿಂದಾಗಿ ಕಾಂಗ್ರೆಸ್ ಅತಿ ಹೆಚ್ಚಿನ ಸಮಸ್ಯೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಅಭ್ಯರ್ಥಿಗಳು ಶಪಥಪತ್ರಕ್ಕೆ ಸಹಿ ಹಾಕಿದರು.

40 ಸದಸ್ಯ ಬಲದ ಗೋವಾದಲ್ಲಿ ಫೆಬ್ರುವರಿ 14ರಂದು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.

ಗೋವಾ ಫಾರ್ವರ್ಡ್ ಪಕ್ಷದೊಂದಿಗೆ (ಜಿಎಫ್‌ಪಿ) ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್, ಚುನಾವಣೆಯನ್ನು ಎದುರಿಸುತ್ತಿದೆ.

ಕಾಂಗ್ರೆಸ್ ಪಕ್ಷವು 37 ಸೀಟುಗಳಲ್ಲಿ ಹಾಗೂ ಉಳಿದ ಮೂರು ಸ್ಥಾನಗಳಲ್ಲಿ ಜಿಎಫ್‌ಪಿ ಸ್ಪರ್ಧಿಸಲಿದೆ.

ಶುಕ್ರವಾರ ಬೆಳಿಗ್ಗೆ ಗೋವಾಕ್ಕೆ ಆಗಮಿಸಿದ ರಾಹುಲ್ ಗಾಂಧಿ ಮನೆ-ಮನೆ ಪ್ರಚಾರದಲ್ಲಿ ಭಾಗಿಯಾದರು. ರಾಹುಲ್ ಉಪಸ್ಥಿತಿಯಲ್ಲಿ ಚುನಾವಣೆ ಗೆದ್ದರೆ ಮುಂದಿನ ಐದು ವರ್ಷಗಳಲ್ಲಿ ಪಕ್ಷ ತೊರೆಯುವುದಿಲ್ಲ ಎಂಬ ಶಪಥಪತ್ರಕ್ಕೆ ಅಭ್ಯರ್ಥಿಗಳು ಸಹಿ ಹಾಕಿದ್ದಾರೆ.

2019ರಲ್ಲಿ ಕಾಂಗ್ರೆಸ್‌ನ 10 ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. 2017ರ ವಿಧಾನಸಭೆ ಚುನಾವಣೆಯ ನಂತರ 40 ಸದಸ್ಯ ಬಲದ ಗೋವಾ ಸದನದಲ್ಲಿ 17 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಈಗ ಸದನದಲ್ಲಿ ಕೇವಲ ಇಬ್ಬರು ಶಾಸಕರನ್ನು ಮಾತ್ರ ಹೊಂದಿದೆ.

***

ಮಹದಾಯಿ ನದಿ ನೀರಿನ ಪಾಲನ್ನು ಪಡೆದುಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ನಡೆಸಲಾಗುವುದು ಎಂದು ಗೋವಾ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಪಕ್ಷವು ಹೇಳಿದೆ. ಈಗಿನ ಬಿಜೆಪಿ ನೇತೃತ್ವದ ಸರ್ಕಾರವು ಮಹದಾಯಿ ನೀರನ್ನು ಕರ್ನಾಟಕಕ್ಕೆ ಉಡುಗೊರೆಯಾಗಿ ಕೊಟ್ಟಿದೆ ಎಂದೂ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.ನ್ಯಾಯಾಲಯಗಳು ಮತ್ತು ನೀರು ಹಂಚಿಕೆ ನ್ಯಾಯಮಂಡಳಿಗಳಲ್ಲಿ ವಾದಿಸಲು ಖ್ಯಾತ ವಕೀಲರನ್ನು ನೇಮಿಸಲಾಗುವುದು ಎಂದು ಪಕ್ಷದ ಮುಖಂಡ ರಾಹುಲ್‌ ಗಾಂಧಿ ಅವರು ಶುಕ್ರವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.ಪಶ್ಚಿಮದತ್ತ ಗೋವಾದ ಮೂಲಕ ಹರಿಯುವ ಯಾವುದೇ ನದಿಯನ್ನು ತಿರುಗಿಸಲು ಅವಕಾಶ ಕೊಡುವುದಿಲ್ಲ ಎಂದೂ ಪ್ರಣಾಳಿಕೆಯು ಭರವಸೆ ಕೊಟ್ಟಿದೆ.

ಮಹದಾಯಿ ವಿವಾದವನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ವಿರೋಧ ಪಕ್ಷಗಳು ಹಾಗೂ ನಾಗರಿಕ ಸಂಘಟನೆಗಳು ಸರ್ಕಾರವನ್ನು ಟೀಕಿಸುತ್ತಲೇ ಇವೆ. ಕರ್ನಾಟಕದಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರವೇ ಇರುವುದರಿಂದ ಬಿಜೆಪಿ ರಾಜಿ ಮಾಡಿಕೊಂಡಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.