ರವಿ ನಾಯ್ಕ್
(ಚಿತ್ರ ಕೃಪೆ: X/@DrPramodPSawant)
ಪಣಜಿ: ಗೋವಾದ ಕೃಷಿ ಸಚಿವ, ಮಾಜಿ ಮುಖ್ಯಮಂತ್ರಿ ರವಿ ನಾಯ್ಕ್, ಬುಧವಾರ ಮಧ್ಯರಾತ್ರಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅವರಿಗೆ 79 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಪಣಜಿಯಿಂದ 30 ಕಿ.ಮೀ. ದೂರದ ನಿವಾಸದಲ್ಲಿ ರವಿ ನಾಯ್ಕ್ ಅವರಿಗೆ ಹೃದಯಸ್ತಂಭನವಾಗಿತ್ತು. ಬಳಿಕ ಪೊಂಡಾ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಿಧನರಾದರು.
ಬುಧವಾರ ಸಂಜೆ ಮೂರು ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ರವಿ ನಾಯ್ಕ್ ಅವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕಾಗಿ ಸ್ವಗೃಹಕ್ಕೆ ತರಲಾಗಿದೆ.
ರವಿ ನಾಯ್ಕ್ ನಿಧನಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂತಾಪ ಸೂಚಿಸಿದ್ದಾರೆ. 'ರವಿ ನಾಯ್ಕ್ ಅವರ ನಾಯಕತ್ವ, ವಿನಯತೆ ಹಾಗೂ ಸಾರ್ವಜನಿಕ ಕಲ್ಯಾಣಕ್ಕೆ ನೀಡಿದ ಕೊಡುಗೆ ಗಮನಾರ್ಹ' ಎಂದು ಉಲ್ಲೇಖಿಸಿದ್ದಾರೆ.
ರವಿ ನಾಯ್ಕ್ ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.1984ರಲ್ಲಿ ಮೊದಲ ಬಾರಿ ಗೋವಾ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆರು ಬಾರಿ ಪೊಂಡಾ ಮತ್ತು ಒಂದು ಬಾರಿ ಮಾರ್ಕೈಮ್ ವಿಧಾನಸಭಾ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದರು. ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ, ಕಾಂಗ್ರೆಸ್, ಮತ್ತು ಬಿಜೆಪಿ ಪಕ್ಷಗಳನ್ನು ಪ್ರತಿನಿಧಿಸಿದ್ದರು.
ಪೊಂಡಾ ವಿಧಾನಸಬಾ ಕ್ಷೇತ್ರದಲ್ಲಿ 1999, 2002,2007, 2017ರಲ್ಲಿ ಕಾಂಗ್ರೆಸ್ ಟಿಕೆಟ್ ಮತ್ತು 2022ರಲ್ಲಿ ಬಿಜೆಪಿ ಟಿಕೆಟ್‌ನಿಂದ ಗೆಲುವು ದಾಖಲಿಸಿದ್ದರು.
1991ರಿಂದ 1993 ಮತ್ತು 1994ರಲ್ಲಿ ಆರು ದಿನಗಳ ವರೆಗೆ (ಏ.2ರಿಂದ 8) ಗೋವಾ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. 1998ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಉತ್ತರ ಗೋವಾದ ಸಂಸದರಾಗಿಯೂ ಆಯ್ಕೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.