
ಗೋವಾ ನೈಟ್ ಕ್ಲಬ್ ಅಗ್ನಿ ಅವಘಡ
(ಪಿಟಿಐ ಚಿತ್ರ)
ಪಣಜಿ: ಉತ್ತರ ಗೋವಾದ ನೈಟ್ ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ 25 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
'ಈ ನೈಟ್ ಕ್ಲಬ್‌ನಲ್ಲಿ ಬೆಂಕಿ ಹೊತ್ತಿಕೊಂಡಾಗ ಡ್ಯಾನ್ಸ್ ಫ್ಲೋರ್‌ನಲ್ಲಿ ಕನಿಷ್ಠ 100 ಮಂದಿ ಇದ್ದರು. ಬೆಂಕಿ ಕಾಣಿಸಿಕೊಂಡಾಗ ಅಲ್ಲಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಡುಗೆ ಕೋಣೆಯತ್ತ ಓಡಿ ಹೋದರು. ಇದರಿಂದಾಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಸಿಕ್ಕಿಹಾಕಿಕೊಂಡರು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರವಾಸಿಗರು ನೃತ್ಯ ಮಾಡುತ್ತಿದ್ದ ಕ್ಲಬ್‌ನ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದಿದ್ದಾರೆ.
ಪಣಜಿಯಿಂದ 25 ಕಿ.ಮೀ. ದೂರದ ಅರ್ಪೊರಾ ಗ್ರಾಮದ ಜನಪ್ರಿಯ ಪಾರ್ಟಿ ಸ್ಥಳವಾದ 'ಬಿರ್ಚ್ ಬೈ ರೊಮಿಯೊ ಲೇನ್' ನೈಟ್ ಕ್ಲಬ್‌ನಲ್ಲಿ ಅವಘಡ ಸಂಭವಿಸಿದೆ.
ಮೃತರಲ್ಲಿ ಹೆಚ್ಚಿನವರು ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಆಗಿದ್ದಾರೆ. ಅವಘಡದಲ್ಲಿ ಮೂರರಿಂದ ನಾಲ್ವರು ಪ್ರವಾಸಿಗರು ಹಾಗೂ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.
'ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲರೂ ಅಡ್ಡಾದಿಡ್ಡಿಯಾಗಿ ಓಡಾಲಾರಂಭಿಸಿದರು. ಹೊರಗೆ ಹೋಗಿ ನೋಡಿದಾಗ ಇಡೀ ಕ್ಲಬ್‌ಗೆ ಬೆಂಕಿ ಆವರಿಸಿತ್ತು' ಎಂದು ಪ್ರಾಣಾಪಾಯದಿಂದ ಪಾರಾಗಿರುವ ಹೈದರಾಬಾದ್‌ನ ಮೂಲದ ಪ್ರವಾಸಿ ಫಾತಿಮಾ ಶೇಖ್ ತಿಳಿಸಿದ್ದಾರೆ.
ಗೋವಾ ನೈಟ್ ಕ್ಲಬ್ ಅಗ್ನಿ ಅವಘಡ
'ವಾರಂತ್ಯವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕನಿಷ್ಠ 100 ಮಂದಿ ಡ್ಯಾನ್ಸ್ ಫ್ಲೋರ್‌ನಲ್ಲಿದ್ದರು' ಎಂದು ಅವರು ತಿಳಿಸಿದ್ದರು.
'ತಾಳೆ ಎಲೆಗಳಿಂದ ನಿರ್ಮಿಸಿದ ತಾತ್ಕಾಲಿಕ ರಚನೆ ಇದಾಗಿತ್ತು. ಹಾಗಾಗಿ ಬೆಂಕಿ ಬೇಗನೇ ಹೊತ್ತಿಕೊಂಡಿತ್ತು' ಎಂದು ಅವರು ಹೇಳಿದ್ದಾರೆ.
'ಅರ್ಪೊರಾ ನದಿಯ ಹಿನ್ನೀರಿನಲ್ಲಿ ಈ ನೈಟ್ ಕ್ಲಬ್ ಇದೆ. ಒಳಗೆ ಹೋಗುವ ಹಾಗೂ ನಿರ್ಗಮನ ಹಾದಿ ಕಿರಿದಾಗಿದೆ. ಇದರಿಂದಾಗಿ ಅಗ್ನಿಶಾಮಕ ಸಿಬ್ಬಂದಿಗೆ ಬೇಗನೇ ಹೋಗಲು ಸಾಧ್ಯವಾಗಲಿಲ್ಲ. 400 ಮೀಟರ್ ದೂರದಲ್ಲಿ ವಾಹನ ನಿಲ್ಲಿಸಬೇಕಾಯಿತು. ಹಾಗಾಗಿ ಬೆಂಕಿಯನ್ನು ನಂದಿಸುವುದು ಕಷ್ಟಕರವಾಗಿತ್ತು' ಅಗ್ನಿಶಾಮಕದಳದ ಅಧಿಕಾರಿ ತಿಳಿಸಿದ್ದಾರೆ.
'ಹೆಚ್ಚಿನ ಮಂದಿ ಕೆಳ ಮಹಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಉಸಿರುಗಟ್ಟಿ ಮೃತಪಟ್ಟಿರಬಹುದು' ಎಂದು ಅವರು ತಿಳಿಸಿದ್ದಾರೆ.
'ನೈಟ್ ಕ್ಲಬ್‌ನಲ್ಲಿ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿಲ್ಲ. ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತ್ತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ.
ಬಿರ್ಚ್ ಬೈ ರೊಮಿಯೊ ಲೇನ್ ನೈಟ್ ಕ್ಲಬ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.