
ಸೌರಭ್ ಹಾಗೂ ಗೌರವ್ ಲೂಥ್ರಾ
ಪಣಜಿ: ಉತ್ತರ ಗೋವಾದ ಬರ್ಚ್ ಬೈ ರೋಮಿಯೊ ಲೇನ್ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಸಹೋದರರನ್ನು ವಶಕ್ಕೆ ಪಡೆದಿರುವ ಗೋವಾ ಪೊಲೀಸರು ವಿಚಾರಣೆ ನಡೆಸಿದರು.
ಬುಧವಾರ ಬೆಳಿಗ್ಗೆ ಮಾಪುಸಾ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವಿಚಾರಣೆಗಾಗಿ ಅಂಜನಾ ಠಾಣೆಗೆ ಕರೆತಂದರು.
ಡಿಸೆಂಬರ್ 6ರಂದು ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 25 ಮಂದಿ ಮೃತಪಟ್ಟಿದ್ದರು. ಘಟನೆ ಬೆನ್ನಲ್ಲೇ ಇಬ್ಬರು ಸಹೋದರರು ಥಾಯ್ಲೆಂಡ್‌ಗೆ ಪರಾರಿಯಾಗಿದ್ದರು. ಭಾರತದ ಮನವಿಯ ಮೇರೆಗೆ ಥಾಯ್ಲೆಂಡ್ ಪೊಲೀಸರು ಡಿ. 11ರಂದು ಫುಕೆಟ್‌ನಲ್ಲಿ ಆರೋಪಿಗಳನ್ನು ಬಂಧಿಸಿದ್ದರು.
ಥಾಯ್ಲೆಂಡ್‌ನಿಂದ ಭಾರತಕ್ಕೆ ಹಸ್ತಾಂತರಿಸಲಾದ ಲೂಥ್ರಾ ಸಹೋದರನ್ನು ಗೋವಾ ಪೊಲೀಸರು ಮಂಗಳವಾರ ದೆಹಲಿಯಲ್ಲಿ ಬಂಧಿಸಿ ಗೋವಾಕ್ಕೆ ಕರೆತಂದಿದ್ದರು.
‘ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಲು ಆರೋಪಿಗಳನ್ನು ಮಾಪುಸಾ ಪಟ್ಟಣದ ಕೋರ್ಟ್‌ಗೆ ಹಾಜರುಪಡಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ. ಕೊಲೆ ಎಂದು ಪರಿಗಣಿಸಲಾಗದ ಮಾನವ ಹತ್ಯೆ ಸೇರಿದಂತೆ ವಿವಿಧ ಆರೋಪಗಳಡಿ ಅಂಜನಾ ಠಾಣೆಯಲ್ಲಿ ಲೂಥ್ರಾ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.