
ಗೋವಾದ ಅಂಜುನಾ ಸಮುದ್ರ ತೀರದ ಬಳಿ ಇರುವ ರೋಮಿಯೊ ಲೇನ್ ಹೋಟೆಲ್ ಅನ್ನು ಸ್ಥಳೀಯ ಆಡಳಿತ ಮಂಗಳವಾರ ತೆರವುಗೊಳಿಸಿತು
ಪಿಟಿಐ ಚಿತ್ರ
ಪಣಜಿ: 25 ಜನರ ಸಾವಿಗೆ ಕಾರಣವಾದ ಗೋವಾದ ರೋಮಿಯೊ ಲೇನ್‌ನಲ್ಲಿರುವ ನೈಟ್‌ಕ್ಲಬ್ ಅಗ್ನಿ ದುರಂತದ ನಂತರ ಲೂತ್ರಾ ಸೋದರರಿಗೆ ಸೇರಿದ 2ನೇ ಕ್ಲಬ್ ಅನ್ನು ಗೋವಾ ಸರ್ಕಾರ ಮಂಗಳವಾರ ನೆಲಸಮಗೊಳಿಸಿದೆ.
ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ‘ಗೋವಾ ವೆಗಟರ್’ ಎಂಬ ರೆಸ್ಟೋರೆಂಟ್ ಸಮೂಹವನ್ನು ಲೂತ್ರಾ ಸೋದರರು ನಡೆಸುತ್ತಿದ್ದರು. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಹೋಟೆಲ್ ಕಟ್ಟಿರುವ ಆರೋಪ ಇವರ ಮೇಲಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ನಿರ್ದೇಶನದಂತೆ ಲೂತ್ರಾ ಅವರ 2ನೇ ಕ್ಲಬ್ ಅನ್ನು ಸ್ಥಳೀಯ ಆಡಳಿತ ನೆಲಸಮಗೊಳಿಸಿತು.
ಲೂತ್ರಾ ಅವರ ಮೇಲೆ ನರಮೇಧದ ಆರೋಪ ಹೊರಿಸಲಾಗಿದೆ. ಕಳೆದ ವಾರ ಗೋವಾದಲ್ಲಿ ಅಗ್ನಿ ದುರಂತ ಸಂಭವಿಸಿದ ಬೆನ್ನಲ್ಲೇ ಗೌರವ್ ಮತ್ತು ಸೌರಭ್ ಲೂತ್ರಾ ದೇಶ ತೊರೆದಿದ್ದಾರೆ. ಥಾಯ್ಲೆಂಡ್‌ನ ಫುಕೆಟ್‌ಗೆ ಇಂಡಿಗೊ ವಿಮಾನ ಮೂಲಕ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇವರ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಅನ್ನು ಇಂಟರ್‌ಪೋಲ್ ಹೊರಡಿಸಿರುವ ಕುರಿತು ಮುಖ್ಯಮಂತ್ರಿ ಕಚೇರಿ ಖಚಿತಪಡಿಸಿದೆ.
ದೆಹಲಿ, ಗೋವಾ, ಹರಿಯಾಣದ ಯಮುನಾ ನಗರ ಸೇರಿದಂತೆ ಹಲವೆಡೆ ‘ರೋಮಿಯೊ ಲೇನ್’ ಎಂಬ ಹೆಸರಿನ ಸರಣಿ ಹೋಟೆಲುಗಳನ್ನು ಹೊಂದಿದ್ದಾರೆ. ದೆಹಲಿಯಲ್ಲಿ ತಮ್ಮ ಮೊದಲ ರೆಸ್ಟೋರೆಂಟ್ ‘ಮಾಮಾಸ್ ಬುಯಿ’ ಆರಂಭಿಸಿದ್ದರು. ಅದು ಯಶಸ್ವಿಯಾದ ಬೆನ್ನಲ್ಲೇ ದೇಶದ ವಿವಿಧ ನಗರಗಳಲ್ಲಿ ರೆಸ್ಟೋರೆಂಟ್ ಆರಂಭಿಸಿದರು.
ದುರ್ಘಟನೆ ನಡೆದ ‘ಬ್ರಿಚ್’ ಎಂಬ ನೈಟ್‌ಕ್ಲಬ್ ಗೋವಾದ ಮೊದಲ ಹಾಗೂ ಏಕೈಕ ದ್ವೀಪ ಕ್ಲಬ್ ಆಗಿದೆ. ಇಲ್ಲಿ ನಡೆಯುವ ಡಿಜೆ ನೈಟ್ ಹಾಗೂ ಇನ್ನಿತರ ಕಾರ್ಯಕ್ರಮಗಳ ಕುರಿತು ಈ ಸೋದರರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಘಟನೆ ನಡೆದ ಶನಿವಾರ ರಾತ್ರಿ ಈ ಕ್ಲಬ್‌ನಲ್ಲಿ ‘ಬಾಲಿವುಡ್ ಬ್ಯಾಂಗರ್ ನೈಟ್’ ಕಾರ್ಯಕ್ರಮ ಆಯೋಜನೆಗೊಂಡಿತ್ತು. ವೇದಿಕೆಯಲ್ಲಿ ಬಾಣ ಬಿರುಸುಗಳನ್ನು ಸಿಡಿಸಿದಾಗ ಇಡೀ ವೇದಿಕೆಗೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಇಡೀ ನೈಟ್‌ಕ್ಲಬ್ ಹೊತ್ತಿ ಉರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.