ADVERTISEMENT

ಗೋವಾದಲ್ಲಿ ಪ್ರಬಲ ಪ್ರತಿಪಕ್ಷ ಆಗುತ್ತೇವೆ: ಕಾಂಗ್ರೆಸ್ ಮುಖಂಡ ಮೈಕೆಲ್ ಲೋಬೋ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 9:14 IST
Last Updated 10 ಮಾರ್ಚ್ 2022, 9:14 IST
ಮೈಕೆಲ್ ಲೋಬೋ (ಚಿತ್ರ ಕೃಪೆ – ಫೇಸ್‌ಬುಕ್)
ಮೈಕೆಲ್ ಲೋಬೋ (ಚಿತ್ರ ಕೃಪೆ – ಫೇಸ್‌ಬುಕ್)   

ಪಣಜಿ: ಗೋವಾದಲ್ಲಿ ಪ್ರಬಲ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದು ಕಾಂಗ್ರೆಸ್ ನಾಯಕ ಮೈಕೆಲ್ ಲೋಬೋ ಹೇಳಿದ್ದಾರೆ.

ಪಂಚ ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಆರಂಭಿಕ ಹಂತದಲ್ಲಿ ಗೋವಾದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಚಿತ್ರಣ ತುಸು ಬದಲಾಗಿದ್ದು ಬಿಜೆಪಿ ಪರ ವಾಲಿದೆ.

ಮಧ್ಯಾಹ್ನ 2.45ರ ವೇಳೆಗೆ ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ ಕೇವಲ 12ರಲ್ಲಿ ಮುಂದಿದೆ. ಎಎಪಿ 2 ಹಾಗೂ ಇತರರು 7 ಕಡೆ ಮುನ್ನಡೆ ಸಾಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮೈಕೆಲ್ ಲೋಬೋ, ‘ನಾವು ಗೆಲ್ಲಬಹುದು ಎಂದು ಭಾವಿಸಿದ್ದೆವು. ಆದರೆ, ಜನರ ತೀರ್ಪನ್ನು ಗೌರವಿಸುತ್ತೇವೆ. ನಮಗೆ 12 ಕ್ಷೇತ್ರಗಳಲ್ಲಷ್ಟೇ ಗೆಲುವು ದೊರೆತಿದೆ. ನಾವು ಪ್ರಬಲ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದ್ದೇವೆ. ಜನರ ವಿಶ್ವಾಸ ಗಳಿಸುವುದಕ್ಕಾಗಿ ಕಾಂಗ್ರೆಸ್ ಕಠಿಣ ಪರಿಶ್ರಮ ಪಡಲಿದೆ’ ಎಂದು ಹೇಳಿದ್ದಾರೆ.

ಗೋವಾದಲ್ಲಿ ಅತಂತ್ರ ವಿಧಾನಸಭೆ ಏರ್ಪಡಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ, ಮಂಗಳವಾರವೇ ಅಲ್ಲಿ ರಾಜಕೀಯ ಚುಟುವಟಿಕೆಗಳು ಬಿರುಸುಗೊಂಡಿದ್ದವು. ಅದೇ ದಿನ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೋವಾಕ್ಕೆ ತೆರಳಿದ್ದರು. ಫಲಿತಾಂಶ ಘೋಷಣೆಗೂ ಮುನ್ನ, ಅಭ್ಯರ್ಥಿಗಳನ್ನು ರೆಸಾರ್ಟ್‌ಗೆ ಸ್ಥಳಾಂತರಿಸಲು ಕಾಂಗ್ರೆಸ್ ಮುಂದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.