ರಮೇಶ್ ತಾವಡ್ಕರ್
-ಪಿಟಿಐ ಚಿತ್ರ
ಪಣಜಿ: ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತಾವಡ್ಕರ್ ಅವರು ಇಂದು (ಗುರುವಾರ) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
57 ವರ್ಷದ ಕಾಣಕೋಣ ಕ್ಷೇತ್ರದ ಶಾಸಕರಾದ ರಮೇಶ್ ತಾವಡ್ಕರ್ ಅವರು ಶಾಸಕಾಂಗ ಕಾರ್ಯದರ್ಶಿ ನಮ್ರತಾ ಉಲ್ಮಾನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಬಳಿಕ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಮೇಶ್ ತಾವಡ್ಕರ್ ಮತ್ತು ಮಾಜಿ ಸಿಎಂ ದಿಗಂಬರ್ ಕಾಮತ್ ಅವರನ್ನು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
‘ನಾನು ಸಭಾಪತಿಯಾಗಿ ಐದು ವರ್ಷ ಪೂರ್ಣಗೊಳಿಸಲು ಬಯಸಿದ್ದೆ. ಆದರೆ, ಪಕ್ಷ (ಬಿಜೆಪಿ) ನನಗೆ ರಾಜೀನಾಮೆ ನೀಡಿ ಸಚಿವ ಸ್ಥಾನ ಅಲಂಕರಿಸುವಂತೆ ಹಾಗೂ ಪಕ್ಷ ಸಂಘಟನೆಗೆ ಶ್ರಮಿಸುವಂತೆ ಸೂಚಿಸಿದೆ’ ಎಂದು ತಾವಡ್ಕರ್ ತಿಳಿಸಿದ್ದಾರೆ.
‘ನನ್ನ ಅವಧಿಯಲ್ಲಿ ಸಭಾಪತಿ ಸ್ಥಾನದ ಗೌರವ ಮತ್ತು ತಟಸ್ಥತೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂಬ ತೃಪ್ತಿ ನನಗಿದೆ. ಸಭಾಪತಿಯಾದವರು ಸಮಾಜಕ್ಕಾಗಿ ಬಹಳಷ್ಟು ಕೆಲಸಗಳನ್ನು ಮಾಡಬಹುದು ಎಂಬುದನ್ನು ನಾನು ತೋರಿಸಿದ್ದೇನೆ. ಸ್ಪೀಕರ್ ಹುದ್ದೆ ಹೊಂದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಸಮಯವನ್ನು ಮೀಸಲಿಟ್ಟಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಜೂನ್ 18ರಂದು ಗೋವಿಂದ್ ಗೌಡೆ ಅವರನ್ನು ಸಂಪುಟದಿಂದ ಕೈಬಿಟ್ಟ ನಂತರ ಒಂದು ಸಚಿವ ಸ್ಥಾನ ಖಾಲಿಯಾಗಿದ್ದರೆ, ಮತ್ತೊಬ್ಬ ಸಚಿವ ಅಲೆಕ್ಸೊ ಸಿಕ್ವೇರಾ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಬುಧವಾರ ರಾಜೀನಾಮೆ ನೀಡಿದ್ದರು.
ತಾವಡ್ಕರ್ ಮತ್ತು ಕಾಮತ್ ಅವರು ಸಚಿವರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ತಿಳಿಸಿದ್ದರು.
2007ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ತಾವಡ್ಕರ್ ಅವರು ಬಿಜೆಪಿ ಸರ್ಕಾರದಲ್ಲಿ ಕ್ರೀಡೆ, ಬುಡಕಟ್ಟು ಕಲ್ಯಾಣ ಮತ್ತು ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.