ADVERTISEMENT

ಚಿನ್ನ ಕಳ್ಳಸಾಗಣೆ ಪ್ರಕರಣ: ರನ್ಯಾ ರಾವ್‌ಗೆ ಸೇರಿದ ₹34ಕೋಟಿ ಮೌಲ್ಯದ ಆಸ್ತಿ ಜಪ್ತಿ

ಪಿಟಿಐ
Published 4 ಜುಲೈ 2025, 15:44 IST
Last Updated 4 ಜುಲೈ 2025, 15:44 IST
   

ನವದೆಹಲಿ: ದುಬೈನಿಂದ ಚಿನ್ನ ಕಳ್ಳ ಸಾಗಣೆಯ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಹರ್ಷವರ್ಧನಿ ರನ್ಯಾ (ರನ್ಯಾ ರಾವ್‌) ಅವರಿಗೆ ಸೇರಿದ ₹34.12 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮಟ್ಟುಗೋಲು ಹಾಕಿಕೊಂಡಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಬಂಧಿತರಾಗಿರುವ ರನ್ಯಾಗೆ ಸೇರಿದ ಬೆಂಗಳೂರಿನ ವಿಕ್ಟೋರಿಯಾ ಲೇಔಟ್‌ನಲ್ಲಿ ಮನೆ, ಅರ್ಕಾವತಿ ಬಡಾವಣೆಯಲ್ಲಿ ನಿವೇಶನ, ತುಮಕೂರಿನಲ್ಲಿ ಕೈಗಾರಿಕಾ ನಿವೇಶನ, ಆನೇಕಲ್ ತಾಲ್ಲೂಕಿನಲ್ಲಿ ಕೃಷಿ ಜಮೀನನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ದಾಖಲಾಗಿರುವ ದೂರಿನಡಿ ಸಿಬಿಐ ಮತ್ತು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಒಪ್ಪಿಗೆ ಮೇರೆಗೆ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿಕೊಂಡಿದೆ.

ADVERTISEMENT

ರನ್ಯಾ ರಾವ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 3ರಂದು ದುಬೈನಿಂದ ಹಿಂದಿರುಗುವಾಗ ಬಂಧಿಸಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಇವರನ್ನು ತಪಾಸಣೆ ನಡೆಸಿದಾಗ ₹12.56 ಕೋಟಿ ಮೌಲ್ಯದ 14.2 ಕೆ.ಜಿ. ಚಿನ್ನವನ್ನು ಅವರಿಂದ ವಶಕ್ಕೆ ಪಡೆಯಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್‌ ಎಸ್‌ಐಟಿ, ಡಿಆರ್‌ಐ, ಇ.ಡಿ ಮತ್ತು ಸಿಬಿಐ ಪ್ರತ್ಯೇಕ ತನಿಖೆ ನಡೆಸುತ್ತಿವೆ. ರನ್ಯಾ ಮತ್ತು ಅವರ ಗೆಳೆಯ ತರುಣ್‌ ರಾಜು ಅವರು ದುಬೈ ಹಾಗೂ ಬೆಂಗಳೂರು ಮಧ್ಯೆ ಹಲವು ಬಾರಿ ಓಡಾಡಿದ್ದು, 49 ಕೆ.ಜಿ.ಗೂ ಹೆಚ್ಚು ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ ಎಂದು ಇ.ಡಿ ಹೇಳಿತ್ತು.

ಚಿನ್ನ ಸಾಗಣೆ ಹಾಗೂ ಮಾರಾಟಕ್ಕೆ ನೆರವು ನೀಡಿದ್ದ ಆರೋಪದ ಮೇರೆಗೆ ರಾಜು ಹಾಗೂ ಸಾಹಿಲ್‌ ಜೈನ್ ಅವರನ್ನು ಬಂಧಿಸಲಾಗಿತ್ತು. ಸದ್ಯ ಮೂವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. 

ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ (ಕಾಫಿಫೋಸಾ) 3(1) ಸೆಕ್ಷನ್‌ ಅಡಿಯಲ್ಲಿ ರನ್ಯಾ ವಿರುದ್ಧ ಏಪ್ರಿಲ್‌ 22ರಂದು ಬಂಧನದ ಆದೇಶ ಹೊರಡಿಸಲಾಗಿದೆ. ಕಾಫಿಪೋಸಾ ಪ್ರಕರಣದಲ್ಲಿ ಬಂಧನವಾದರೆ ಜಾಮೀನಿನ ಮೇಲೆ ಬಿಡುಗಡೆ ಸಾಧ್ಯವಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.