ADVERTISEMENT

ಹೊಸ ಐಟಿ ನಿಯಮಗಳು ತನ್ನ ಸರ್ಚ್‌ ಎಂಜಿನ್‌ಗೆ ಅನ್ವಯಿಸದು: ಗೂಗಲ್‌

ಹೈಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪಿನ ವಿರುದ್ಧ ಗೂಗಲ್‌ ಮೇಲ್ಮನವಿ: ಕೇಂದ್ರಕ್ಕೆ ಹೈಕೋರ್ಟ್‌ ನೋಟಿಸ್‌

ಪಿಟಿಐ
Published 2 ಜೂನ್ 2021, 8:32 IST
Last Updated 2 ಜೂನ್ 2021, 8:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಡಿಜಿಟಲ್‌ ಮಾಧ್ಯಮಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳು ತನ್ನ ಸರ್ಚ್‌ ಎಂಜಿನ್‌ಗೆ ಅನ್ವಯವಾಗುವುದಿಲ್ಲ ಎಂದು ಗೂಗಲ್‌ ದೆಹಲಿ ಹೈಕೋರ್ಟ್‌ನಲ್ಲಿ ವಾದಿಸಿದೆ.

ಅಲ್ಲದೆ ಅಂತರ್ಜಾಲದಿಂದ ಆಕ್ಷೇಪಾರ್ಹ ವಿಷಯವನ್ನು ತೆಗೆಯುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಏಕ ಸದಸ್ಯ ಪೀಠ ಕಂಪನಿಗೆ ನೀಡಿದ್ದ ಆದೇಶವನ್ನು ಕೈಬಿಡಬೇಕೆಂದು ಅದು ಮೇಲ್ಮನವಿಯಲ್ಲಿ ಕೋರಿದೆ.

ಕೆಲ ದುಷ್ಕರ್ಮಿಗಳು ಮಹಿಳೆಯೊಬ್ಬರ ಛಾಯಾಚಿತ್ರಗಳನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ವಿಷಯವೊಂದರ ಪ್ರಕರಣ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್‌ ಏಕ ಸದಸ್ಯ ಪೀಠ ಈ ಕುರಿತು ಆದೇಶಿಸಿತ್ತು. ಆದೇಶದ ಹೊರತಾಗಿಯೂ ಈ ವಿಷಯವನ್ನು ವರ್ಲ್ಡ್‌ ವೈಡ್‌ ವೆಬ್‌ನಿಂದ ಪೂರ್ಣವಾಗಿ ತೆಗೆದುಹಾಕಲಾಗಿಲ್ಲ. ದುಷ್ಕರ್ಮಿಗಳು ಇದನ್ನು ಮತ್ತೆ ಮತ್ತೆ ಪೋಸ್ಟ್‌ ಮಾಡುತ್ತಿದ್ದಾರೆ ಹಾಗೂ ಇತರ ವೆಬ್‌ಸೈಟ್‌ಗಳೊಂದಿಗೂ ಹಂಚಿಕೊಳ್ಳುತ್ತಿದ್ದಾರೆ.

ADVERTISEMENT

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಎನ್‌.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠವು ಈ ಕುರಿತು ಕೇಂದ್ರ, ದೆಹಲಿ ಸರ್ಕಾರ, ಇಂಟರ್ನೆಟ್ ಸೇವಾ ಪೂರೈಕೆದಾರರ ಸಂಘ, ಫೇಸ್‌ಬುಕ್, ಅಶ್ಲೀಲ ತಾಣ ಮತ್ತು ಸಂಬಂಧಿಸಿದ ಮಹಿಳೆಗೆ ನೋಟಿಸ್ ಜಾರಿಗೊಳಿಸಿತು. ಜುಲೈ 25 ರೊಳಗೆ ಪ್ರತಿಕ್ರಿಯೆ ದಾಖಲಿಸುವಂತೆ ನ್ಯಾಯಪೀಠ ಸೂಚಿಸಿತು. ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ಹೊರಡಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿತು.

ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠ ಏಪ್ರಿಲ್‌ 20ರಂದು ಹೊರಡಿಸಿರುವ ತೀರ್ಪಿನಲ್ಲಿ ಗೂಗಲ್‌ ಸರ್ಚ್‌ ಎಂಜಿನ್‌ ಅನ್ನು ‘ಸಾಮಾಜಿಕ ಮಾಧ್ಯಮದ ಮಧ್ಯವರ್ತಿ’ ಅಥವಾ ಮಹತ್ವದ ಸಾಮಾಜಿಕ ಮಾಧ್ಯಮದ ಮಧ್ಯವರ್ತಿ’ ಎಂದು ತಪ್ಪಾಗಿ ನಿರೂಪಿಸಲಾಗಿದೆ ಎಂದು ಗೂಗಲ್‌ ಮೇಲ್ಮನವಿಯಲ್ಲಿ ವಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.