ADVERTISEMENT

ಜಂಟಿ ಸದನ ಸಮಿತಿಯಿಂದ ಇಂದು ಗೂಗಲ್, ಪೇಟಿಎಂ ಪ್ರತಿನಿಧಿಗಳ ವಿಚಾರಣೆ

ಏಜೆನ್ಸೀಸ್
Published 29 ಅಕ್ಟೋಬರ್ 2020, 1:53 IST
Last Updated 29 ಅಕ್ಟೋಬರ್ 2020, 1:53 IST
ಜಂಟಿ ಸದನ ಸಮಿತಿಯ ಮುಖ್ಯಸ್ಥೆ ಮೀನಾಕ್ಷಿ ಲೇಖಿ
ಜಂಟಿ ಸದನ ಸಮಿತಿಯ ಮುಖ್ಯಸ್ಥೆ ಮೀನಾಕ್ಷಿ ಲೇಖಿ   

ನವದೆಹಲಿ: ವೈಯಕ್ತಿಕ ದತ್ತಾಂಶ ಸುರಕ್ಷಾ ಮಸೂದೆಯ (2019) ಹಲವು ಅಂಶಗಳನ್ನು ಪರಿಶೀಲಿಸುತ್ತಿರುವ ಜಂಟಿ ಸದನ ಸಮಿತಿಯು ಗುರುವಾರ ಗೂಗಲ್ ಮತ್ತು ಪೇಟಿಎಂ ಕಂಪನಿಗಳ ಪ್ರತಿನಿಧಿಗಳಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಮುಖ್ಯಸ್ಥರಾಗಿರುವ ಈ ಸಮಿತಿಯು 2019ರಲ್ಲಿ ಸಿದ್ಧವಾಗಿರುವ ಮಸೂದೆಯ ವಿವಿಧ ಅಂಶಗಳನ್ನು ಪರಿಶೀಲಿಸುತ್ತಿದೆ. ಸಂಬಂಧಿಸಿದವರ ಜೊತೆಗೆ ಸಮಾಲೋಚನೆ ನಡೆಸುತ್ತಿದೆ.

ಸಮಿತಿಯ ಎದುರು ಹಾಜರಾಗುವಅಧಿಕಾರಿಗಳು ಮೌಖಿಕ ಸಾಕ್ಷ್ಯಗಳನ್ನು ಒದಗಿಸಬೇಕಾಗುತ್ತದೆ.ಪೇಟಿಎಂ ಅಧಿಕಾರಿಗಳು ಬೆಳಿಗ್ಗೆ 11ಕ್ಕೆ ಸಮಿತಿಯ ಎದುರು ಹಾಜರಾದರೆ, ಗೂಗಲ್‌ನ ಅಧಿಕಾರಿಗಳು ಮಧ್ಯಾಹ್ನ 3ಕ್ಕೆ ಸಮಾಲೋಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎನ್‌ಡಿಟಿವಿ ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಕಳೆದ ಶುಕ್ರವಾರ ಫೇಸ್‌ಬುಕ್ ಅಧಿಕಾರಿಗಳು ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದರು. ಟ್ವಿಟರ್‌ನ ಪ್ರತಿನಿಧಿಗಳು ನಿನ್ನೆ (ಬುಧವಾರ) ಬೆಳಿಗ್ಗೆ 11ಕ್ಕೆ ಸಮಿತಿಯ ಸದಸ್ಯರನ್ನು ಭೇಟಿಯಾಗಿದ್ದರು.

ADVERTISEMENT

ಅಮೆಜಾನ್ ಈ ಹಿಂದೆ ಸಮಾಲೋಚನೆಗೆ ಹಾಜರಾಗಲು ನಿರಾಕರಿಸಿತ್ತು. ಶಿಸ್ತುಕ್ರಮದ ಎಚ್ಚರಿಕೆ ನೀಡಿದ ನಂತರ ಅಮೆಜಾನ್ ಪ್ರತಿನಿಧಿಗಳು ನಿನ್ನೆ ಸಂಸತ್‌ ಭವನಕ್ಕೆ ಬಂದು, ಸಮಿತಿಯ ಸದಸ್ಯರ ಪ್ರಶ್ನೆಗಳನ್ನು ಮೂರೂವರೆ ತಾಸು ಎದುರಿಸಿದರು. ಮೌಖಿಕ ಆಧಾರಗಳನ್ನು ನೀಡಿದರು.

ಕಳೆದ ವರ್ಷ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಫೇಸ್‌ಬುಕ್, ಗೂಗಲ್ ಸೇರಿದಂತೆ ಹಲವು ಕಂಪನಿಗಳು ಸಂಗ್ರಹಿಸುತ್ತಿರುವ ಅನಾಮಿಕ ಮತ್ತು ನಿಖರ ದತ್ತಾಂಶಗಳನ್ನು ಪ್ರಶ್ನಿಸಲು, ಪಡೆಯಲು ಸರ್ಕಾರಕ್ಕೆ ಈ ಮಸೂದೆಯು ಅವಕಾಶ ನೀಡಲಿದೆ ಎಂದು ಹೇಳಿದ್ದರು.

ಸರ್ಕಾರವು ನಾಗರಿಕರ ವೈಯಕ್ತಿಕ ದತ್ತಾಂಶ ಪಡೆದುಕೊಳ್ಳುವ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್‌ ಆತಂಕ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.