ADVERTISEMENT

ರಾಜ್ಯಪಾಲರಿಗೆ ಕಾಲಮಿತಿ | ಸಂವಿಧಾನ ತಿದ್ದುಪಡಿ ಆಗುವ ತನಕ ವಿರಮಿಸೆ: ಸ್ಟಾಲಿನ್

ಪಿಟಿಐ
Published 21 ನವೆಂಬರ್ 2025, 16:13 IST
Last Updated 21 ನವೆಂಬರ್ 2025, 16:13 IST
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್   

ಚೆನ್ನೈ: ‘ವಿಧಾನನಸಭೆಗಳು ಅಂಗೀಕರಿಸುವ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಸಂಬಂಧಿಸಿ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡಬೇಕು. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ಅಗತ್ಯ. ಇದು ಈಡೇರುವವರೆಗೆ ವಿರಮಿಸುವುದಿಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶುಕ್ರವಾರ ಹೇಳಿದ್ದಾರೆ.

‘ಮಸೂದೆಗಳಿಗೆ ಅಂಕಿತ ಹಾಕುವುದಕ್ಕಾಗಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಸಾಧ್ಯ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ ಗುರುವಾರವಷ್ಟೆ ತೀರ್ಪು ನೀಡಿತ್ತು. ಈ ಕುರಿತು ಅವರು ನೀಡಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ರಾಜ್ಯಗಳ ಹಕ್ಕುಗಳು ಹಾಗೂ ಒಕ್ಕೂಟ ವ್ಯವಸ್ಥೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದಿದ್ದಾರೆ.

ADVERTISEMENT

‘ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ಪೀಠವೊಂದು, ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರಿಗೆ ಮೂರು ತಿಂಗಳ ಗಡುವು ನೀಡಿ ಏಪ್ರಿಲ್‌ 8ರಂದು ತೀರ್ಪು ನೀಡಿತ್ತು. ಈ ವಿಷಯಕ್ಕೆ ಸಂಬಂಧಿಸಿ ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್‌ನ ಸಲಹೆ ಕೇಳಿದ್ದರು. ಅಂಕಿತ ಹಾಕುವುದಕ್ಕೆ ಕಾಲಮಿತಿ ನಿಗದಿ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್‌ ಈಗ ತೀರ್ಪು ನೀಡಿದ್ದರೂ, ಏಪ್ರಿಲ್‌ 8ರಂದು ಸುಪ್ರೀಂ ಕೋರ್ಟ್‌ನ ಪೀಠವೊಂದು ನೀಡಿರುವ ತೀರ್ಪಿನ ಮೇಲೆ ಇದು ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ’ ಎಂದು ಸ್ಟಾಲಿನ್‌ ಪ್ರತಿಪಾದಿಸಿದ್ದಾರೆ.

ಸಾಂವಿಧಾನಿಕ ಹುದ್ದೆಯಲ್ಲಿರುವ ಯಾವುದೇ ವ್ಯಕ್ತಿ ತಾನು ಸಂವಿಧಾನಕ್ಕಿಂತ ಮೇಲು ಎಂದು ಹೇಳುವಂತಿಲ್ಲ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಾಗ ಸಾಂವಿಧಾನಿಕ ನ್ಯಾಯಾಲಯಗಳಿಂದಲೇ ನಮಗೆ ಪರಿಹಾರ ಸಿಗುತ್ತದೆ
ಎಂ.ಕೆ.ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.