ಮುಂಬೈ: ರಾಜ್ಯ ಸರ್ಕಾರದ ನೌಕರರು ನಡೆಸುತ್ತಿರುವ ಮುಷ್ಕರದ ಜೊತೆಯೇ ನಡೆಯುತ್ತಿರುವ ಇನ್ನಿತರ ಮುಷ್ಕರಗಳನ್ನು ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಶುಕ್ರವಾರ ಕೇಳಿತು. ಜೊತೆಗೆ, ಈ ಮುಷ್ಕರಗಳಿಂದ ಸಾಮಾನ್ಯ ಜನರು ತೊಂದರೆಗೀಡಾಗಬಾರದು ಎಂದು ಕೂಡಾ ಎಚ್ಚರಿಕೆ ನೀಡಿತು.
ಶಿಕ್ಷಕರು ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರವನ್ನು ಕೂಡಲೇ ಹಿಂಪಡೆಯುವಂತೆ ಕೋರಿ ವಕೀಲ ಗುಣ್‌ರತನ್ ಸದಾವರ್ತೆ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪ್ರಭಾರೆ ಮುಖ್ಯ ನ್ಯಾಯಮೂರ್ತಿ ಎಸ್.ವಿ. ಗಂಗಾಪುರ್ವಾಲ ಮತ್ತು ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರಿದ್ದ ವಿಭಾಗೀಯ ಪೀಠ ನಡೆಸಿತು.
‘ಸದ್ಯ ನಡೆಯುತ್ತಿರುವ ಮುಷ್ಕರಗಳ ಕುರಿತು ನಮ್ಮ ಆತಂಕವೇನೆಂದರೆ, ಸಾರ್ವಜನಿಕರು ಯಾವುದೇ ಅಗತ್ಯ ಸೇವೆಯಿಂದ ವಂಚಿತರಾಗಬಾರದು. ಅವರು ಯಾವ ಕಾರಣಕ್ಕೂ ತೊಂದರೆಗೀಡಾಗಬಾರದು. ಈ ವಿಷಮ ಪರಿಸ್ಥಿತಿಯನ್ನು ಕೊನೆಗಾಣಿಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ. ಜನರಿಗೆ ಅಗತ್ಯ ಸೇವೆಗಳು ಮತ್ತು ಮೂಲ ಸೌಕರ್ಯಗಳು ದೊರಕುವಂತೆ ಮಾಡಲು ಸರ್ಕಾರ ಯಾವೆಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದು ನಾವು ತಿಳಿಯಬೇಕು’ ಎಂದಿತು.
ಸರ್ಕಾರದ ಪರವಾಗಿ ಕೋರ್ಟ್‌ನಲ್ಲಿ ಕೋರ್ಟ್‌ನಲ್ಲಿ ಹಾಜರಿದ್ದ ಅಡ್ವೊಕೇಟ್ ಜನರಲ್ ಬಿರೇಂದ್ರ ಸರಫ್ ಅವರು, ಈ ಮುಷ್ಕರಗಳನ್ನು ಅಕ್ರಮವಾಗಿ ನಡೆಸಲಾಗುತ್ತಿದೆ. ಮುಷ್ಕರಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದೆ ಎಂದರು.
2005ರಲ್ಲಿ ರದ್ದು ಮಾಡಲಾದ ಹಳೆ ಪಿಂಚಣಿ ನೀತಿಯನ್ನು ಪುನಃ ಜಾರಿ ಮಾಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ನೌಕರರು ಮಾರ್ಚ್ 14ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.