ADVERTISEMENT

ಮಾಹಿತಿ ಆಯೋಗದ ಅಧಿಕಾರ ಮೊಟಕು: ವಿರೋಧ ಪಕ್ಷಗಳ ಭಾರಿ ಆಕ್ಷೇಪ

ಲೋಕಸಭೆಯಲ್ಲಿ ಮಸೂದೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:46 IST
Last Updated 19 ಜುಲೈ 2019, 19:46 IST
   

ನವದೆಹಲಿ: ವಿರೋಧ ಪಕ್ಷಗಳ ಭಾರಿ ಆಕ್ಷೇಪದ ನಡುವೆಯೇ ಮಾಹಿತಿ ಹಕ್ಕು ಕಾಯ್ದೆ (ತಿದ್ದುಪಡಿ) ಮಸೂದೆಯನ್ನು ಸರ್ಕಾರವು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದೆ. ಕರ್ತವ್ಯದ ಅವಧಿ ಮತ್ತು ಕರ್ತವ್ಯದ ನಿಯಮಗಳಿಗೆ ಸಂಬಂಧಿಸಿ ಚುನಾವಣಾ ಆಯುಕ್ತರಿಗೆ ಸರಿಸಮಾನವಾದ ಸ್ಥಾನಮಾನ ಮಾಹಿತಿ ಆಯುಕ್ತರಿಗೂ ಇದೆ. ಅದನ್ನು ರದ್ದು ಮಾಡುವುದು ಈ ತಿದ್ದುಪಡಿ ಮಸೂದೆಯ ಮುಖ್ಯ ಉದ್ದೇಶ.

ಮುಖ್ಯ ಮಾಹಿತಿ ಆಯುಕ್ತ ಮತ್ತು ಇತರ ಮಾಹಿತಿ ಆಯುಕ್ತರ ಸ್ವಾತಂತ್ರ್ಯ ವನ್ನು ಮೊಟಕುಗೊಳಿಸುವುದು ಈ ಮಸೂದೆಯ ಗುರಿ. ಹಾಗಾಗಿ ಇದನ್ನು ವಿರೋಧಿಸುತ್ತೇವೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಹೇಳಿದರು.

ಇದು ಮಾಹಿತಿ ಹಕ್ಕು (ತಿದ್ದುಪಡಿ) ಮಸೂದೆ ಅಲ್ಲ. ಬದಲಿಗೆ ಮಾಹಿತಿ ಹಕ್ಕು ನಿರ್ನಾಮ ಮಸೂದೆ ಎಂದು ಕಾಂಗ್ರೆಸ್‌ನ ಶಶಿ ತರೂರ್‌ ಹೇಳಿದರು.

ADVERTISEMENT

ಮಾಹಿತಿ ಆಯೋಗದ ಸಾಂಸ್ಥಿಕ ಸ್ವಾತಂತ್ರ್ಯದ ಎರಡು ಬಹುದೊಡ್ಡ ಗುರಾಣಿಗಳನ್ನು ಈ ಮಸೂದೆಯು ತೆಗೆದು ಹಾಕಲಿದೆ. ಅದಲ್ಲದೆ, ವೇತನ ನಿರ್ಣಯಿಸುವ ಅಧಿಕಾರವನ್ನು ಕಸಿದುಕೊಳ್ಳುವ ಮೂಲಕ ರಾಜ್ಯಗಳ ಮಾಹಿತಿ ಆಯುಕ್ತರನ್ನು ನಿಯಂತ್ರಿಸಲು ಹೊರಟಿದೆ. ಕೇಂದ್ರ ಸರ್ಕಾರವು ಮಾಹಿತಿ ಹಕ್ಕು ವ್ಯವಸ್ಥೆಯನ್ನು ಧ್ವಂಸ ಮಾಡಲು ಹೊರಟಿದೆ ಎಂದು ತರೂರ್‌ ಪ್ರತಿಪಾದಿಸಿದರು.

ಮಸೂದೆಯನ್ನು ಮಂಡಿಸಬೇಕೇ ಬೇಡವೇ ಎಂಬ ವಿಚಾರವನ್ನು ಮತಕ್ಕೆ ಹಾಕಲಾಯಿತು. ಆದರೆ, ಮತಕ್ಕೆ ಹಾಕುವ ಹೊತ್ತಿಗೆ ಬಹುತೇಕ ಎಲ್ಲ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ್ದರು. ಹಾಗಾಗಿ, ಮಸೂದೆ ಪರವಾಗಿ 224 ಮತ್ತು ವಿರುದ್ಧ ಒಂಬತ್ತು ಮತಗಳು ದಾಖಲಾದವು.

ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರು ಮಸೂದೆಯನ್ನು ಮಂಡಿಸಿ ಮಾತನಾಡಿದರು.

ಚುನಾವಣಾ ಆಯೋಗ ಮತ್ತು ಮಾಹಿತಿ ಆಯೋಗದ ಕೆಲಸಗಳು ಸಂಪೂರ್ಣವಾಗಿ ಭಿನ್ನ. ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆ. ಆದರೆ, ಮಾಹಿತಿ ಆಯೋಗಗಳು ಶಾಸನಾತ್ಮಕ ಸಂಸ್ಥೆಗಳು. ಹಾಗಾಗಿ, ಎರಡೂ ಆಯೋಗಗಳ ಸ್ಥಾನಮಾನ ಮತ್ತು ಕರ್ತವ್ಯದ ನಿಯಮಗಳು ಭಿನ್ನವಾಗಿಯೇ ಇರಬೇಕು ಎಂದು ಅವರು ಪ್ರತಿಪಾದಿಸಿದರು.

ಈಗ ಇರುವ ಮಾಹಿತಿ ಹಕ್ಕು ಕಾಯ್ದೆ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತ ಮತ್ತು ಮುಖ್ಯ ಮಾಹಿತಿ ಆಯುಕ್ತರ ವೇತನ ಮತ್ತು ಕರ್ತವ್ಯದ ನಿಯಮಗಳು ಸಮಾನವಾಗಿವೆ. ಚುನಾವಣಾ ಆಯುಕ್ತರು ಮತ್ತು ಮಾಹಿತಿ ಆಯುಕ್ತರಿಗೆ ಸಮಾನವಾದ ಸ್ಥಾನ ಇದೆ. ಮುಖ್ಯ ಚುನಾವಣಾ ಆಯುಕ್ತರ ವೇತನ ಮತ್ತು ಸ್ಥಾನಮಾನ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗೆ ಸಮಾನವಾದದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.