ADVERTISEMENT

ಎಲಾರಾ ಕ್ಯಾಪಿಟಲ್ಸ್ ಹೂಡಿಕೆ ಸತ್ಯ ಹೊರಬರಲಿದೆ: ಜೈರಾಮ್ ರಮೇಶ್‌

ಪಿಟಿಐ
Published 20 ಮೇ 2025, 14:10 IST
Last Updated 20 ಮೇ 2025, 14:10 IST
ಜೈರಾಮ್ ರಮೇಶ್‌
ಜೈರಾಮ್ ರಮೇಶ್‌   

ನವದೆಹಲಿ: ಅದಾನಿ ಸಮೂಹದ ಷೇರುಗಳನ್ನು ಹೊಂದಿರುವ ಮಾರಿಷಸ್ ಮೂಲದ ಎಲಾರಾ ಕ್ಯಾಪಿಟಲ್‌ ಸಂಸ್ಥೆಯ ಎರಡು ಫಂಡ್‌ಗಳಿಗೆ ಸಂಬಂಧಿಸಿದಂತೆ ದಂಡ ವಿಧಿಸುವುದು ಹಾಗೂ ಲೈಸೆನ್ಸ್‌ ರದ್ದುಪಡಿಸುವ ಸಂಬಂಧ ಸೆಬಿ ಎಚ್ಚರಿಕೆ ನೀಡಿದೆ.

ಈ ಕುರಿತ ಮಾಧ್ಯಮ ವರದಿಗಳನ್ನು ‘ಎಕ್ಸ್’ನಲ್ಲಿ ಉಲ್ಲೇಖಿಸಿ ಅಭಿಪ್ರಾಯ ಹಂಚಿಕೊಂಡಿರುವ ಕಾಂಗ್ರೆಸ್‌ ಪಕ್ಷ, ‘ಅದಾನಿ ಗ್ರೂಪ್‌ಗೆ ಅನುಕೂಲ ಮಾಡಿಕೊಡಲೆಂದೇ ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆ ಎಂಬುದು ಸೆಬಿಯ ಈ ಎಚ್ಚರಿಕೆಯಿಂದ ಬಯಲಾಗಿದೆ’ ಎಂದು ಟೀಕಿಸಿದೆ.

ಅದಾನಿ ಸಮೂಹ ಅಥವಾ ಭಾರತೀಯ ಸೆಕ್ಯುರಿಟಿ ಮತ್ತು ವಿನಿಮಯ ಮಂಡಳಿ (ಸೆಬಿ) ತಕ್ಷಣಕ್ಕೆ ಈ ವರದಿಗಳ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ಎಲಾರಾ ಕ್ಯಾಪಿಟಲ್ಸ್ ನಿರ್ವಹಣೆ ಮಾಡುತ್ತಿರುವ ಎಲಾರಾ ಇಂಡಿಯಾ ಆಪರ್ಚುನಿಟೀಸ್‌ ಫಂಡ್ ಮತ್ತು ವೆಸ್ಪೆರಾ ಫಂಡ್‌ಗೆ ಸಂಬಂಧಿಸಿದಂತೆ ಸೆಬಿ ಈ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಈ ಕುರಿತು ‘ಎಕ್ಸ್’ ಸಂದೇಶದಲ್ಲಿ, ‘ಡಬಲ್‌ ಎಂಜಿನ್‌ನ ‘ಮೊದಾನಿ ಯಶೋಗಾಥೆ’ ಮುಂದುವರಿದಿದೆ’ ಎಂದು ಟೀಕಿಸಿದ್ದಾರೆ.

ಇಂಡಿಯಾ ಆಪರ್ಚುನಿಟೀಸ್‌ ಫಂಡ್‌ನ ಶೇ 98.78ರಷ್ಟು ಮೊತ್ತವನ್ನು 2022ರ ಡಿಸೆಂಬರ್‌ನಲ್ಲಿ ಅದಾನಿ ಕಂಪನಿಗಳಲ್ಲಿ ವಿನಿಯೋಗಿಸಿದ್ದರೆ, ವೆಸ್ಟೆರಾ ಫಂಡ್‌ನ ಶೇ  93.9
ರಷ್ಟನ್ನು 2022ರ ಜೂನ್‌ನಲ್ಲಿ ಅದಾನಿ ಎಂಟರ್‌ ಪ್ರೈಸಸ್‌ನಲ್ಲಿ ವಿನಿಯೋಗಿಸಿದೆ ಎಂದಿದ್ದಾರೆ. 

‘ಈ ಕುರಿತ ಲೋಪವನ್ನು ಮುಚ್ಚಿಡಲು ಸರ್ಕಾರ ಯತ್ನಿಸಬಹುದು. ಆದರೆ, ಒಂದಿಲ್ಲೊಂದು ದಿನ ಸತ್ಯ ಹೊರಗೆ ಬರಲಿದೆ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.