ADVERTISEMENT

ಅದಾನಿ ಹಗರಣ ಚರ್ಚೆಗೆ ನಿರಾಕರಣೆ: ಸುಗಮ ಕಲಾಪಕ್ಕೆ ಬಿಜೆಪಿ ಅಡ್ಡಿ; ಪ್ರಿಯಾಂಕಾ

ಪಿಟಿಐ
Published 10 ಡಿಸೆಂಬರ್ 2024, 10:47 IST
Last Updated 10 ಡಿಸೆಂಬರ್ 2024, 10:47 IST
<div class="paragraphs"><p>ಪ್ರಿಯಾಂಕಾ ಗಾಂಧಿ (ಸಂಗ್ರಹ ಚಿತ್ರ)&nbsp;</p></div>

ಪ್ರಿಯಾಂಕಾ ಗಾಂಧಿ (ಸಂಗ್ರಹ ಚಿತ್ರ) 

   

ನವದೆಹಲಿ: ಅದಾನಿ ಹಗರಣ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗೆ ಆಡಳಿತ ಪಕ್ಷ ಅವಕಾಶ ಕಲ್ಪಿಸದ ಕಾರಣ, ಲೋಕಸಭೆಯ ಸುಗಮ ಕಲಾಪಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಆರೋಪಿಸಿದ್ದಾರೆ.

ಅದಾನಿ ವಿಷಯ ಪ್ರಸ್ತಾಪಿಸಲು ಮೊಂಡುತನ ಪ್ರದರ್ಶಿಸುತ್ತಿರುವ ಬಿಜೆಪಿ, ಸದನವನ್ನು ಬೇರೆಡೆ ಸೆಳೆಯಲು ತಂತ್ರದ ಭಾಗವಾಗಿ ಕಾಂಗ್ರೆಸ್ ಜಾರ್ಜ್ ಸೋರೊಸ್ ಅವರೊಂದಿಗೆ ಸಂಪರ್ಕದಲ್ಲಿದೆ ಎಂದು ಆರೋಪಿಸಿದೆ. ಆದರೆ ವಾಸ್ತವವಾಗಿ ಅತ್ಯಂತ ಹಾಸ್ಯಾಸ್ಪದ ವಿಷಯ ಎಂದು ಭಾವಿಸುತ್ತೇನೆ ಎಂದು ಪ್ರಿಯಾಂಕಾ ತಿರುಗೇಟು ನೀಡಿದರು.

ADVERTISEMENT

‘ಸದನದಲ್ಲಿ ಕಲಾಪ ನಡೆಸಲು ಆಡಳಿತ ಪಕ್ಷಕ್ಕೆ ಇಷ್ಟವಿಲ್ಲ ಅಥವಾ ಅವರು ಸಾಮರ್ಥ್ಯ ಹೊಂದಿಲ್ಲ. ಆಡಳಿತ ಪಕ್ಷವು ವಿನಃ ಕಾರಣ ಕಲಾಪವನ್ನು ಮುಂದೂಡುತ್ತದೆ‘ ಎಂದು ಕಿಡಿಕಾರಿದ್ದಾರೆ.

‘ಇದುವರೆಗೂ ಸದನಕ್ಕೆ ಪ್ರಧಾನಿ ನರೇಂದ್ರ ಮೋದಿ ಬರದೆ ಇರುವುದು ನೂತನ ಸಂಸದೆಯಾಗಿ ನನಗೆ ಆಶ್ಚರ್ಯವೆನಿಸುತ್ತದೆ. ಸದನದಲ್ಲಿ ಅದಾನಿ ವಿಷಯ ಪ್ರಸ್ತಾಪಿಸುವುದು ಅವಶ್ಯಕ. ಏಕೆಂದರೆ, ಈ ವಿಚಾರ ಅಮೆರಿಕದಲ್ಲಿ ಚರ್ಚೆಯಾಗಿದೆ‘ ಎಂದೂ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಶೂನ್ಯ ಅವಧಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವ್ಯಂಗ್ಯ ಚಿತ್ರಗಳಿರುವ ಮುಖವಾಡಗಳು ಮತ್ತು ಜಾಕೆಟ್‌ಗಳನ್ನು ಧರಿಸಿ ಸದನಕ್ಕೆ ಬರುವ ವಿರೋಧ ಪಕ್ಷಗಳು ಸಂಸತ್ತಿನ ಗೌರವದ ಮೇಲೆ ದಾಳಿ ನಡೆಸಿವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿ ಗದ್ದಲ ಸೃಷ್ಠಿಸುತ್ತಿರುವುದರಿಂದ ಸದನದಲ್ಲಿ ಇತರೆ ಸದಸ್ಯರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸುವುದರಿಂದ ವಂಚಿತರಾಗುತ್ತಿದ್ದಾರೆ ಎಂದು ರಿಜಿಜು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಗಳ ಗುತ್ತಿಗೆಯನ್ನು ಸುಲಭವಾಗಿ ಪಡೆಯಲು ಅಧಿಕಾರಿಗಳಿಗೆ 25 ಕೋಟಿ ಡಾಲರ್‌ಗಳಷ್ಟು (ಅಂದಾಜು ₹2,100 ಕೋಟಿ) ಲಂಚ ನೀಡಿದ್ದಾರೆ ಇಲ್ಲವೆ ನೀಡಲು ಮುಂದಾಗಿದ್ದಾರೆ ಎಂದು ಗೌತಮ್‌ ಅದಾನಿ ಹಾಗೂ ಅವರ ಅಣ್ಣನ ಮಗ ಸಾಗರ್‌ ಅದಾನಿ ವಿರುದ್ಧ ಅಮೆರಿಕದ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ, ಅವರ ಬಂಧನಕ್ಕೆ ಕೋರ್ಟ್‌ ವಾರಂಟ್‌ ಹೊರಡಿಸಿದೆ.

ಲಂಚದ ಆರೋಪದ ಮೇಲೆ ಗೌತಮ್ ಅದಾನಿ ಮತ್ತು ಇತರ ಕಂಪನಿಗಳ ಅಧಿಕಾರಿಗಳ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಾಗಿರುವ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸುವಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.