ADVERTISEMENT

ಮುಂಬೈ: ಉದ್ಯಾನಕ್ಕಿಟ್ಟಿದ್ದ ಟಿಪ್ಪು ಹೆಸರು ತೆಗೆದು ಹಾಕಲು ‘ಮಹಾ’ ಸರ್ಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 14:25 IST
Last Updated 27 ಜನವರಿ 2023, 14:25 IST
ಮಂಗಲ್‌ ಪ್ರಭಾತ್‌ ಲೋಧಾ
ಮಂಗಲ್‌ ಪ್ರಭಾತ್‌ ಲೋಧಾ   

ಮುಂಬೈ: ಮಲಾಡ್‌ನಲ್ಲಿನ ಉದ್ಯಾನವೊಂದಕ್ಕೆ ಇಡಲಾಗಿರುವ ‘ಟಿಪ್ಪು ಸುಲ್ತಾನ್’ ಹೆಸರನ್ನು ತೆಗೆದು ಹಾಕುವಂತೆ ಸ್ಥಳೀಯ ಆಡಳಿತಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಹಿಂದೆ ಅಧಿಕಾರದಲ್ಲಿದ್ದ ಉದ್ಧವ್‌ ಠಾಕ್ರೆ ನೇತೃತ್ವದ ಮಹಾವಿಕಾಸ್‌ ಆಘಾಡಿ (ಎಂವಿಎ) ಸರ್ಕಾರವು ಈ ಉದ್ಯಾನಕ್ಕೆ ಟಿಪ್ಪು ಸುಲ್ತಾನ್‌ ಎಂಬುದಾಗಿ ನಾಮಕರಣ ಮಾಡಿತ್ತು. ಆದರೆ, ಈ ಹೆಸರನ್ನು ತೆಗೆದು ಹಾಕುವಂತೆ ಪ್ರಸಕ್ತ ಸರ್ಕಾರ ಆದೇಶಿಸಿರುವುದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಮುಂಬೈ ಉಪನಗರ ಜಿಲ್ಲೆಯ ಉಸ್ತುವಾರಿ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ADVERTISEMENT

‘ಇದು ಬಲಪಂಥಕ್ಕೆ ಸಂದ ಜಯ. ಉದ್ಯಾನಕ್ಕೆ ಇಟ್ಟಿರುವ ಹೆಸರನ್ನು ತೆಗೆದು ಹಾಕುವಂತೆ ಒತ್ತಾಯಿಸಿ ಸಕಲ ಹಿಂದೂ ಸಮಾಜ ಪ್ರತಿಭಟನೆಗಳನ್ನು ನಡೆಸಿತ್ತು. ಇದೇ ಬೇಡಿಕೆಯನ್ನು ಮುಂಬೈ ಉತ್ತರ ಲೋಕಸಭಾ ಸಂಸದ ಗೋಪಾಲ್‌ ಶೆಟ್ಟಿ ಅವರು ಡಿಪಿಡಿಸಿ ಸಭೆಯಲ್ಲಿ ಮಂಡಿಸಿದ್ದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದು ಹಾಕುವಂತೆ ಆದೇಶಿಸಲಾಗಿದೆ’ ಎಂದು ಲೋಧಾ ಹೇಳಿದ್ದಾರೆ.

‘ಈ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲ. ಉದ್ಯಾನದ ಮರುನಾಮಕರಣ ವಿರೋಧಿಸಿ ಜನರು ಬೀದಿಗಿಳಿದು ಪ್ರತಿಭಟಿಸಿದ್ದರು. ಜನರ ಭಾವನೆಗಳಿಗೆ ಗೌರವ ಕೊಟ್ಟು, ಈ ಆದೇಶ ಹೊರಡಿಸಲಾಗಿದೆ ಅಷ್ಟೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಸದ್ಯ ಉದ್ಯಾನಕ್ಕೆ ಯಾವ ಹೆಸರನ್ನು ಇಡಬೇಕು ಎಂಬ ಬಗ್ಗೆ ಯಾವುದೇ ಪ್ರಸ್ತಾವಗಳಿಲ್ಲ. ಮುಂಬರುವ ಸಭೆಗಳಲ್ಲಿ ಪ್ರಸ್ತಾವಗಳು ಸಲ್ಲಿಕೆಯಾಗಲಿದ್ದು, ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ, ಹಿರಿಯ ಕಾಂಗ್ರೆಸ್‌ ಮುಖಂಡ ಹಾಗೂ ಎಂವಿಎ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದ ಅಸ್ಲಾಂ ಶೇಖ್‌ ಅವರು ಈ ಉದ್ಯಾನ ಉದ್ಘಾಟಿಸಿದ್ದರು. ಉದ್ಯಾನಕ್ಕೆ ಟಿಪ್ಪು ಸುಲ್ತಾನ್‌ ಎಂದು ಹೆಸರಿಟ್ಟಿದ್ದರು.

ಉದ್ಯಾನದ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿ, ಕಳೆದ ವರ್ಷ ಜನವರಿ 26ರಂದು ಬಲಪಂಥೀಯ ಸಂಘಟನೆಗಳು, ಬಿಜೆಪಿ ಮುಖಂಡರಾದ ಶೆಟ್ಟಿ ಹಾಗೂ ಲೋಧಾ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.