ನವದೆಹಲಿ: ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಹೊಣೆಯಿಂದ ಸರ್ಕಾರಗಳು ಹಿಂದಕ್ಕೆ ಸರಿದಿರುವುದು ಹಾಗೂ ನವ–ಉದಾರೀಕರಣ ನೀತಿಗಳ ಪ್ರಭಾವವು ಜಾಸ್ತಿ ಆಗುತ್ತಿರುವುದು ವಿಶ್ವವಿದ್ಯಾಲಯಗಳಲ್ಲಿ ತಾತ್ಕಾಲಿಕ ಅವಧಿಗೆ ಪ್ರಾಧ್ಯಾಪಕರ ನೇಮಕ ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣಗಳು ಎಂದು ಸಂಸತ್ತಿನ ಸಮಿತಿಯೊಂದು ಹೇಳಿದೆ.
ಕಾಯಂ ಉದ್ಯೋಗಗಳ ಕೊರತೆಯ ಕಾರಣದಿಂದಾಗಿ ಈ ಬಗೆಯ ಗುತ್ತಿಗೆ ಕೆಲಸಗಳನ್ನು ಮಾಡಲು ಬಹಳಷ್ಟು ಜನ ಮುಂದಾಗುತ್ತಿದ್ದಾರೆ ಎಂದು ಸಮಿತಿಯು ಹೇಳಿದೆ.
ಭಾರತದ ಉನ್ನತ ಶಿಕ್ಷಣ ಆಯೋಗ ಕರಡು ಮಸೂದೆಯಲ್ಲಿ ಲೋಪಗಳು ಇವೆ ಎಂದು ಹೇಳಿರುವ ಸಮಿತಿಯು, ಈ ಮಸೂದೆಯು ದೇಶದ ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಯ ಖಾಸಗೀಕರಣಕ್ಕೆ ಪರೋಕ್ಷವಾಗಿ ಇಂಬು ಕೊಡುತ್ತದೆ ಎಂದು ಹೇಳಿದೆ. ಮಾನವಿಕ ವಿಷಯಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೌಶಲ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂದು ಶಿಫಾರಸು ಮಾಡಿದೆ.
ಬಹುತೇಕ ವಿಶ್ವವಿದ್ಯಾಲಯಗಳು, ಅದರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ಸಾವಿರ ಬೋಧಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ನೇತೃತ್ವದ ‘ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ’ ಹೇಳಿದೆ.
ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಮಂಗಳವಾರ ಮಂಡಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ಕ್ರಮಗಳಿಗೆ ಪ್ರತಿಕ್ರಿಯೆಯನ್ನು ದಾಖಲಿಸಿರುವ ಸಮಿತಿಯು, ಗುತ್ತಿಗೆ ಆಧಾರದ ನೇಮಕಗಳು ಉದ್ಯೋಗಕ್ಕೆ ಭದ್ರತೆ ಕಲ್ಪಿಸುವುದಿಲ್ಲ, ವೇತನ ಹೆಚ್ಚಳ ಇರುವುದಿಲ್ಲ, ಸಾಮಾಜಿಕ ಭದ್ರತಾ ಸೌಲಭ್ಯಗಳು ಕಡಿಮೆ ಇರುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಗುತ್ತಿಗೆ ಆಧಾರದಲ್ಲಿ ನೇಮಕ ಆದವರು ಸಂಶೋಧನೆ ಕೈಗೊಳ್ಳಲು ಯುತ್ನಿಸಿದರೆ ಅನುದಾನದ ಕೊರತೆ ಇರುತ್ತದೆ, ಸಾಂಸ್ಥಿಕ ಮಾನ್ಯತೆಯ ಕೊರತೆ ಕೂಡ ಇರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇಲಾಖೆಯು ಉದ್ಯೋಗವನ್ನು ಕಾಯಂಗೊಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಉದ್ಯಮಗಳು ಹಾಗೂ ಕೆಲವು ಸಂಸ್ಥೆಗಳನ್ನು ತೊಡಗಿಸಿಕೊಂಡು ಕೌಶಲ ತರಬೇತಿ ನೀಡುವ ಉಪಕ್ರಮಗಳಲ್ಲಿ ವಾಣಿಜ್ಯ, ವಿಜ್ಞಾನ ಅಥವಾ ತಾಂತ್ರಿಕ ಶಿಕ್ಷಣದ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ಗಮನ ನೀಡುವ ಪ್ರವೃತ್ತಿ ಸರಿಯಲ್ಲ ಎಂದು ವರದಿ ಬೊಟ್ಟುಮಾಡಿದೆ. ಮಾನವಿಕ ಮತ್ತು ಅದಕ್ಕೆ ಸಂಬಂಧಿಸಿದ ಶೈಕ್ಷಣಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.