ನವದೆಹಲಿ (ಪಿಟಿಐ): ಮೈತೇಯಿ ಮತ್ತು ಕುಕಿ ಸಮುದಾಯದ ನಡುವಣ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡಲು ಹರಸಾಹಸ ಪಡುತ್ತಿರುವ ಕೇಂದ್ರ ಸರ್ಕಾರವು, ಶನಿವಾರ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ.
ಕಳೆದ ತಿಂಗಳು ಸಂಘರ್ಷ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಣಿವೆ ರಾಜ್ಯದಲ್ಲಿ ಶಾಂತಿ ಪುನರ್ ಸ್ಥಾಪನೆಗೆ ಸಮಿತಿ ರಚಿಸುವುದಾಗಿ ಘೋಷಿಸಿದ್ದರು. ಇದರ ಅನ್ವಯ ಸಮಿತಿ ರಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ವಿವಿಧ ಪಕ್ಷದ ನಾಯಕರು, ಸಂಘ–ಸಂಸ್ಥೆಗಳು, ನಿವೃತ್ತ ಅಧಿಕಾರಿಗಳು, ಶಿಕ್ಷಣ ತಜ್ಞರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸಂತ್ರಸ್ತ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳೂ ಈ ಸಮಿತಿಯಲ್ಲಿದ್ದಾರೆ.
ಸಂಘರ್ಷಕ್ಕೆ ತುತ್ತಾಗಿರುವ ಸಮುದಾಯಗಳ ನಡುವಣ ಮತ್ತೆ ಶಾಂತಿ ನೆಲೆಗೊಳ್ಳಲು ಅಗತ್ಯವಿರುವ ಕ್ರಮಕೈಗೊಳ್ಳುವಂತೆ ಸಮಿತಿಗೆ ಸೂಚಿಸಲಾಗಿದೆ. ಬುಡಕಟ್ಟು ಜನರ ನಡುವೆ ಮಾತುಕತೆ ಮೂಲಕ ಶಾಂತಿ, ಸೌಹಾರ್ದದ ವಾತಾವರಣ ಮೂಡಿಸಲು ಸಮಿತಿಯು ಕಾರ್ಯ ನಿರ್ವಹಿಸಲಿದೆ ಎಂದು ಸಚಿವಾಲಯ ತಿಳಿಸಿದೆ.
130 ಶಸ್ತ್ರಾಸ್ತ್ರ ಹಿಂದಿರುಗಿಸಿದ ಯುವಕರು:
ಭದ್ರತಾ ಪಡೆಗಳಿಂದ ಕಳವು ಮಾಡಿರುವ ಶಸ್ತ್ರಾಸ್ತ್ರಗಳನ್ನು ವಾಪಸ್ ನೀಡುವಂತೆ ಸಚಿವ ಎಲ್. ಸುಸಿಂದ್ರೋ ಮೈತೇಯಿ ಮಾಡಿದ ಮನವಿಗೆ ಅನಾಮಧೇಯ ಯುವಕರು ಸ್ಪಂದಿಸಿದ್ದು, 130 ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಿದ್ದಾರೆ.
ಇಂಫಾಲ್‌ನ ಪೂರ್ವ ಭಾಗದಲ್ಲಿರುವ ತಮ್ಮ ಮನೆಯ ಮುಂಭಾಗ ಸಚಿವರು, ಪೆಟ್ಟಿಗೆಯೊಂದನ್ನು ಇಟ್ಟು ಅದರೊಳಗೆ ಶಸ್ತ್ರಾಸ್ತ್ರಗಳನ್ನು ಹಾಕುವಂತೆ ದೊಡ್ಡ ಪೋಸ್ಟರ್ ಅಳವಡಿಸಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಯುವಕರು ಅದರೊಳಗೆ ಶಸ್ತ್ರಾಸ್ತ್ರಗಳನ್ನು ಹಾಕಿ ಹೋಗಿದ್ದಾರೆ.
‘ಪೊಲೀಸರ ಬಳಿ ಈ ಪೆಟ್ಟಿಗೆಯ ಕೀಲಿ ಇದ್ದು, ಅವರು ಯಾವಾಗ ಬೇಕಾದರೂ ಅವುಗಳನ್ನು ತೆಗೆದುಕೊಂಡು ಹೋಗಬಹುದು’ ಎಂದು ಸಚಿವರು ತಿಳಿಸಿದ್ದಾರೆ.
ಹಿಂಸಾಚಾರಕ್ಕೆ ಇಲ್ಲಿಯವರೆಗೆ 100 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 37,450 ಜನರು ನಿರಾಶ್ರಿತರಾಗಿದ್ದು, ಅವರಿಗೆ 272 ಶಿಬಿರಗಳಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ.
- ಮೋದಿ ಮೌನ ಪ್ರಶ್ನಿಸಿದ ಖರ್ಗೆ
ನವದೆಹಲಿ(ಪಿಟಿಐ): ಹಿಂಸಾಚಾರದ ಬಗ್ಗೆ ಮಾತನಾಡದೆ ಮೌನವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಧೋರಣೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟುವಾಗಿ ಟೀಕಿಸಿದ್ದಾರೆ. ‘ಹಿಂಸಾಚಾರ ಇನ್ನೂ ತಹಬಂದಿಗೆ ಬಂದಿಲ್ಲ. ಆದರೆ ಶಾಂತಿ ಕಾಪಾಡುವಂತೆ ಸಂಘರ್ಷದಿಂದ ನಲುಗಿರುವ ಜನರಿಗೆ ಮೋದಿ ಮನವಿ ಮಾಡದೆ ಮೌನಕ್ಕೆ ಜಾರಿದ್ದಾರೆ. ಇದು ಮಣಿಪುರದ ನಾಗರಿಕರಿಗೆ ಬಗೆದ ದ್ರೋಹವಾಗಿದೆ’ ಎಂದು ಆರೋಪಿಸಿದ್ದಾರೆ. ‘ಮೇ 3ರಂದು ಹಿಂಸಾಚಾರ ಶುರುವಾಯಿತು. ಒಂದು ತಿಂಗಳ ಬಳಿಕ ಕೇಂದ್ರ ಗೃಹ ಸಚಿವರನ್ನು ಸಂಘರ್ಷ ಪೀಡಿತ ನೆಲಕ್ಕೆ ಕಳುಹಿಸಿದ್ದೀರಿ. ಅಮಿತ್ ಶಾ ಭೇಟಿ ನೀಡಿದ ಎಂಟು ದಿನಗಳ ಬಳಿಕ ಮತ್ತೆ ಹಿಂಸಾಚಾರ ಮುಂದುವರಿಸಿದೆ. ಈಶಾನ್ಯ ಭಾರತಕ್ಕೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗೆಗಿನ ಪ್ರತಿಪಾದನೆ ಹಾಗೂ ನಿಮ್ಮ ಮೌನವು ಜನರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ’ ಎಂದು ದೂರಿದ್ದಾರೆ. ಬಿಜೆಪಿಯೇ ಹಿಂಸಾಚಾರದ ಜವಾಬ್ದಾರಿ ಹೊರಬೇಕು. ಆ ಪಕ್ಷದ ಒಡೆದಾಳುವ ರಾಜಕೀಯ ನೀತಿಯೇ ಇದಕ್ಕೆ ಕಾರಣ. ಗಡಿ ರಾಜ್ಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಮುಖ್ಯಮಂತ್ರಿ ಬಿರೆನ್ ಸಿಂಗ್ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
- ಹಿಮಂತ–ಬಿರೆನ್ ಚರ್ಚೆ
ಇಂಫಾಲ್(ಪಿಟಿಐ): ಮಣಿಪುರಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರೊಟ್ಟಿಗೆ ರಾಜ್ಯದ ಸದ್ಯದ ಸ್ಥಿತಿಗತಿ ಬಗ್ಗೆ ಮಾತುಕತೆ ನಡೆಸಿದರು. ಚರ್ಚೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಂತ ‘ಮುಖ್ಯಮಂತ್ರಿ ಸಚಿವರು ಬಿಜೆಪಿ ನಾಯಕರು ಮತ್ತು ಹಲವು ಸಂಘಟನೆಗಳ ಜೊತೆಗೆ ಚರ್ಚಿಸಿದ್ದೇನೆ. ಪ್ರಸ್ತುತ ರಾಜ್ಯದಲ್ಲಿ ಶಾಂತಿ ಕಾಪಾಡುವುದು ಬಹುಮುಖ್ಯವಾಗಿದೆ. ಸಭೆಯಲ್ಲಿ ಚರ್ಚಿಸಿದ ವಿಷಯವನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ತಿಳಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಮಣಿಪುರ ಒಗ್ಗಟ್ಟಿನ ಸಹಕಾರ ಸಮಿತಿಯ ಮುಖ್ಯಸ್ಥ ಖುರೈಜಮ್ ಅಥೌಬಾ ‘ಶಾಂತಿ ಸ್ಥಾಪನೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.