ADVERTISEMENT

ಕೋವಿಡ್‌: ಬಳಕೆ ಆಗದ ರೈಲ್ವೆ ಐಸೊಲೇಷನ್‌ ಕೋಚ್‌ಗಳು

₹ 39 ಕೋಟಿ ವೆಚ್ಚ: ಧಗೆ, ಹವಾನಿಯಂತ್ರಿತ ಸೌಲಭ್ಯ ಇಲ್ಲದಿರುವುದು, ಆಕ್ಸಿಜನ್‌ ಕೊರತೆ ಪ್ರಮುಖ ಕಾರಣ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 16:15 IST
Last Updated 27 ಏಪ್ರಿಲ್ 2021, 16:15 IST
ಮಹಾರಾಷ್ಟ್ರದ ನಂದುರ್‌ಬರ್ ನಿಲ್ದಾಣದಲ್ಲಿ ನಿಲ್ಲಿಸಲಾದ ರೈಲ್ವೆ ಐಸೋಲೇಷನ್‌ ಕೋಚ್
ಮಹಾರಾಷ್ಟ್ರದ ನಂದುರ್‌ಬರ್ ನಿಲ್ದಾಣದಲ್ಲಿ ನಿಲ್ಲಿಸಲಾದ ರೈಲ್ವೆ ಐಸೋಲೇಷನ್‌ ಕೋಚ್   
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ವರ್ಷದ ಹಿಂದೆ, ಕೋವಿಡ್ ಚಿಕಿತ್ಸೆಗೆ ಪೂರಕವಾಗಿ 5,601 ರೈಲು ಬೋಗಿಗಳನ್ನು ಒಟ್ಟು ₹ 39 ಕೋಟಿ ವೆಚ್ಚದಲ್ಲಿ ಐಸೋಲೇಷನ್‌ ಕೋಚ್‌ ಆಗಿ ಪರಿವರ್ತಿಸಿತ್ತು. ಆದರೆ, ಇವುಗಳ ಬಳಕೆಗೆ ಈಗ ರಾಜ್ಯಗಳು ಆಸಕ್ತಿ ತೋರುತ್ತಿಲ್ಲ.

ಆರ್‌ಟಿಐ ಮೂಲಕ 'ಪ್ರಜಾವಾಣಿ' ಪಡೆದ ಮಾಹಿತಿಯಂತೆ, ಒಟ್ಟು ₹ 38.33 ಕೋಟಿ ಅನ್ನು ಕೋಚ್ ಪರಿವರ್ತನೆಗೆ ವ್ಯಯಿಸಲಾಗಿದೆ. ಹೀಗೇ ಪರಿವರ್ತಿಸಿದ ಒಟ್ಟು 813 ಕೋಚ್‌ಗಳನ್ನು ಮನವಿ ಆಧರಿಸಿ ದೆಹಲಿಗೆ 503, ಉತ್ತರ ಪ್ರದೇಶಕ್ಕೆ 270 ಮತ್ತು ಬಿಹಾರಕ್ಕೆ 40 ಬೋಗಿಗಳನ್ನು ಒದಗಿಸಲಾಗಿತ್ತು.

ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿದ್ದರೂ ರಾಜ್ಯಗಳು, ಪರಿವರ್ತಿಸಲಾದ ಐಸೋಲೇಷನ್‌ ಕೋಚ್‌ಗಳನ್ನು ಬಳಸಲು ಉತ್ಸಾಹ ತೋರುತ್ತಿಲ್ಲ. ಬೇಸಿಗೆ ತೀವ್ರತರವಾಗಿದ್ದು, ಕೋಚ್‌ಗಳು ಹವಾನಿಯಂತ್ರಿತವಲ್ಲ ಎಂಬುದೇ ಇದಕ್ಕೆ ಕಾರಣ. ಆಲ್ಲದೆ, ಆರೋಗ್ಯ ಕ್ಷೇತ್ರದ ಪರಿಣತರು ಇವುಗಳ ಬಳಕೆಗೆ ಒಲವು ತೋರುತ್ತಿಲ್ಲ.

ಜನವರಿ 12ರಂದು ದೆಹಲಿ ಸರ್ಕಾರ ಮತ್ತೊಂದು ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿ, ಕೋವಿಡ್–19 ಕೋಚ್‌‌ಗಳಲ್ಲಿ 856 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದಿತ್ತು. ಎಷ್ಟು ಬೋಗಿ ಬಳಕೆಯಾಗಿವೆ, ಎಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂಬುದರ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಯಾವುದೇ ಮಾಹಿತಿ ಇಲ್ಲ.
ಇನ್ನೊಂದೆಡೆ ಬೋಗಿಗಳನ್ನು ಪರಿವರ್ತಿಸಲು ಮಾಡಿರುವ ವೆಚ್ಚವು ಏಕರೂಪವಾಗಿಲ್ಲ. ಪ್ರತಿ ಬೋಗಿಯ ಪರಿವರ್ತನೆಗೆ ನಾಗಪುರದ ಮೆಕಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಕಡಿಮೆ ಅಂದರೆ ಸುಮಾರು ₹ 6,752 ರೂಪಾಯಿ ವೆಚ್ಚವಾಗಿದ್ದರೆ, ಫೂರ್ವವಲಯದ ರೈಲ್ವೆಯಲ್ಲಿ ₹ 1.22 ಲಕ್ಷ ವೆಚ್ಚವಾಗಿದೆ.

ಕೋವಿಡ್ ಸೋಂಕಿತರಿಗೆ ಕ್ವಾರಂಟೈನ್‌ ಮತ್ತು ಐಸೊಲೇಷನ್‌ ಚಿಕಿತ್ಸೆಗೆ ನೆರವಾಗುವುದು ಬೋಗಿಯನ್ನು ಪರಿವರ್ತನೆ ಮಾಡುವುದರ ಮುಖ್ಯ ಉದ್ದೇಶವಾಗಿತ್ತು. ಜೊತೆಗೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾಗಬಹುದು ಎಂಬ ಆತಂಕವೂ ಇತ್ತು.

ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಪ್ರಸ್ತುತ ದೇಶದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ 4,000 ಕೋವಿಡ್ ಆರೈಕೆ ಕೋಚ್‌ಗಳನ್ನು ನಿಲ್ಲಿಸಲಾಗಿದೆ. ಇವುಗಳ ಒಟ್ಟು ಹಾಸಿಗೆ ಸಾಮರ್ಥ್ಯ 64,000. ಆದರೆ, ಪ್ರಕರಣಗಳು ಏರುತ್ತಿದ್ದರೂ ರಾಜ್ಯಗಳು ಏಕೆ ಇವುಗಳನ್ನು ಬಳಕೆ ಮಾಡುತ್ತಿಲ್ಲ ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ.

ದೆಹಲಿಯಲ್ಲಿ 800 ಹಾಸಿಗೆಗಳ ಸಾಮರ್ಥ್ಯದ 50 ಕೋಚ್‌ಗಳನ್ನು ಶಕುರ್‌ಬಸ್ತಿ ನಿಲ್ದಾಣ ಮತ್ತು ಆನಂದ್ ವಿಹಾರ ಟರ್ಮಿನಲ್‌ನಲ್ಲಿ ನಿಲ್ಲಿಸಲಾಗಿದೆ. ಮಹಾರಾಷ್ಟ್ರದ ನಂದೂರ್‌ಬರ್‌ನಲ್ಲಿ 21 ಕೋಚ್‌ಗಳು, ಭೋಪಾಲ್‌ನಲ್ಲಿ 20 ಕೋಚ್‌ಗಳು, ಪಂಜಾಬ್‌ನಲ್ಲಿ 50, ಜಬಲ್‌ಪುರದಲ್ಲಿ 20 ಕೋಚ್‌ಗಳನ್ನು ನಿಲ್ಲಿಸಲಾಗಿದೆ.

ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ರೋಗಿಗಳು ಆಸ್ಪತ್ರೆಯ ಹಾಸಿಗೆಗೇ ಒತ್ತು ನೀಡುತ್ತಿದ್ದಾರೆ. ಬೋಗಿಗಳನ್ನು ಸದ್ಯ ನಾವು ಬಳಸುತ್ತಿಲ್ಲ. ಈ ಕೋಚ್‌ಗಳು ಹವಾನಿಯಂತ್ರಿತವಲ್ಲ. ರೋಗಿಗಳಿಗೆ ಸಮಸ್ಯೆ ಆಗಲಿದೆ. ಸದ್ಯ, ಆಕ್ಸಿಜನ್‌ ಕೊರತೆಯೂ ಇದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.


ರೈಲ್ವೆ ಕೋಚ್‌ಗಳನ್ನು ಐಸೋಲೇಷನ್‌ ಕೋಚ್ ಆಗಿ ಪರಿವರ್ತಿಸುವ ನಿರ್ಧಾರವನ್ನು ಕಳೆದ ವರ್ಷ ಮಾರ್ಚ್‌ 25ರಂದು ನಡೆದಿದ್ದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಕೈಗೊಳ್ಳಲಾಗಿತ್ತು. ರೈಲ್ವೆ ವಿಭಾಗೀಯ ಪ್ರಧಾನ ವ್ಯವಸ್ಥಾಪ‍ಕರಿಗೆ ಬಳಿಕ ಬರೆದಿದ್ದ ಪತ್ರದಲ್ಲಿ ಹೀಗೆ 20,000 ಕೋಚ್‌ಗಳನ್ನು ಪರಿವರ್ತಿಸುವ ಬಗ್ಗೆ ಉಲ್ಲೇಖವಿತ್ತು. ಆರಂಭಿಕವಾಗಿ ಒಟ್ಟು 5,000 ಕೋಚ್‌ಗಳನ್ನು ಪರಿವರ್ತಿಸುವ ಗುರಿಯನ್ನು ಹೊಂದಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.