ADVERTISEMENT

ರೈತರೊಂದಿಗೆ ಮಾತುಕತೆ, ಶೀಘ್ರದಲ್ಲೇ ಪ್ರತಿಭಟನೆಗೆ ಕೊನೆ: ರಾಜನಾಥ್ ಸಿಂಗ್

ಏಜೆನ್ಸೀಸ್
Published 23 ಡಿಸೆಂಬರ್ 2020, 8:18 IST
Last Updated 23 ಡಿಸೆಂಬರ್ 2020, 8:18 IST
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್    

ನವದೆಹಲಿ: ರೈತರೊಂದಿಗೆ ಕೇಂದ್ರ ಸರ್ಕಾರವು 'ಸಂಪೂರ್ಣ ಸಂವೇದನಾಶೀಲತೆಯೊಂದಿಗೆ' ಮಾತನಾಡುತ್ತಿದೆ ಮತ್ತು ಶೀಘ್ರದಲ್ಲೇ ಅವರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುತ್ತಾರೆ ಎಂದು ರೈತ ದಿನಾಚರಣೆಯ ಸಂದರ್ಭದಲ್ಲಿ ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಬುಧವಾರಕ್ಕೆ 28ನೇ ದಿನಕ್ಕೆ ಕಾಲಿಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್ ಅವರು, ಇಂದು ರೈತ ದಿನಾಚರಣೆಯ ಸಂದರ್ಭದಲ್ಲಿ ದೇಶಕ್ಕೆ ಕೊಡುಗೆ ನೀಡಿದ ಎಲ್ಲರನ್ನು ನಾನು ಸ್ವಾಗತಿಸುತ್ತೇನೆ. ಅವರು ದೇಶಕ್ಕೆ ಆಹಾರ ಭದ್ರತೆ ಒದಗಿಸಿದ್ದಾರೆ. ಕೆಲವು ರೈತರು ಕೃಷಿ ಕಾನೂನುಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಸರ್ಕಾರ ಅವರೊಂದಿಗೆ ಸಂಪೂರ್ಣ ಸಂವೇದನಾಶೀಲತೆಯೊಂದಿಗೆ ಮಾತನಾಡುತ್ತಿದೆ. ಅವರು ಶೀಘ್ರದಲ್ಲೇ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ADVERTISEMENT

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆಯನ್ನು ನೆನಪಿಸಿಕೊಂಡಿರುವ ಅವರು, 'ಚೌಧರಿ ಚರಣ್ ಸಿಂಗ್ ಅವರು ದೇಶದ ರೈತರ ಆದಾಯ ಹೆಚ್ಚಬೇಕು, ಅವರ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು ಮತ್ತು ರೈತರ ಗೌರವವನ್ನು ಕಾಪಾಡಬೇಕು ಎಂದು ಬಯಸಿದ್ದರು. ಅವರಿಂದ ಪ್ರಧಾನಿ ನರೇಂದ್ರ ಮೋದಿ ಸ್ಫೂರ್ತಿ ಪಡೆದಿದ್ದು, ರೈತರ ಹಿತದೃಷ್ಟಿಯಿಂದ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ' ಎಂದು ತಿಳಿಸಿದ್ದಾರೆ.

ರೈತರು ಮತ್ತು ಕೃಷಿಕರ ಕೊಡುಗೆಗಳನ್ನು ಸ್ಮರಿಸಲು ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತ ದಿನವನ್ನು ಆಚರಿಸಲಾಗುತ್ತದೆ.

ಸೋಮವಾರದಿಂದ ರೈತರು 24 ಗಂಟೆಗಳ ಸುದೀರ್ಘ ಸರಣಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದು, ಪ್ರತಿದಿನ 11 ಜನರು ಉಪವಾಸದಲ್ಲಿ ಕುಳಿತಿದ್ದಾರೆ.

ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಯ ನಂತರವೂ ರೈತರ ಪ್ರತಿಭಟನೆ ಮುಂದುವರಿದಿದೆ. ನವೆಂಬರ್ 26ರಿಂದ ರಾಷ್ಟ್ರ ರಾಜಧಾನಿಯ ಹಲವು ಗಡಿಗಳಲ್ಲಿ ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.