ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಮಾಲಿನ್ಯ ಪರಿಸ್ಥಿತಿ ಗಂಭೀರ ಸ್ಥಿತಿಯಲ್ಲಿದ್ದು, ದೆಹಲಿ–ಎನ್‌ಸಿಆರ್‌ನ ಕೇಂದ್ರೀಯ ವಾಯುಗುಣಮಟ್ಟ ಸಮಿತಿಯು ಚಳಿಗಾಲದ ವಾಯು ಮಾಲಿನ್ಯ ನಿಯಂತ್ರಣ ಯೋಜನೆಯಡಿಯಲ್ಲಿ ಕಠಿಣವಾದ ಹಂತ–4ರ ನಿರ್ಬಂಧಗಳನ್ನು ವಿಧಿಸಿದೆ.
ಈ ಮೂಲಕ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಸೇರಿದಂತೆ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.
ಚಳಿಗಾಲದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ರೂಪಿಸಿರುವ ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ (ಜಿಆರ್‌ಎಪಿ) ಹಂತ 4ರ ನಿರ್ಬಂಧಗಳ ಅಡಿ ದೆಹಲಿಗೆ ಅನಿವಾರ್ಯವಲ್ಲದ ಸರಕು ಸಾಗಣೆ ಮಾಡುವ ಮಾಲಿನ್ಯಕಾರಕ ಟ್ರಕ್‌ಗಳ ಪ್ರವೇಶದ ಮೇಲೆ ನಿಷೇಧ, 10 ಮತ್ತು 12ನೇ ತರಗತಿ ಹೊರತುಪಡಿಸಿ ಶಾಲಾ ತರಗತಿಗಳನ್ನು ಕಡ್ಡಾಯವಾಗಿ ಹೈಬ್ರಿಡ್ ಮಾದರಿಗೆ ಬದಲಾಯಿಸುವ ನಿಯಮಗಳೂ ಇವೆ.
ದೆಹಲಿಯ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯುಐ) ಸೋಮವಾರ ಸಂಜೆ 4 ಗಂಟೆ ಹೊತ್ತಿಗೆ 379 ರಷ್ಟಿತ್ತು, ರಾತ್ರಿ 10ರ ಸುಮಾರಿಗೆ 400ರ ಗಡಿಯನ್ನು ಮೀರಿದೆ
ಸೋಮವಾರ ಮಧ್ಯಾಹ್ನ ದೆಹಲಿಯ ಎಕ್ಯುಐ 350ರ ಗಡಿ ದಾಟಿದ ನಂತರ ಜಿಆರ್‌ಎಪಿ ಹಂತ 3ರ ಅಡಿಯಲ್ಲಿ ವಾಯುಗುಣಮಟ್ಟ ನಿಯಂತ್ರಣ ಆಯೋಗವು (ಸಿಎಕ್ಯುಎಂ ನಿರ್ಬಂಧಿತ ಕ್ರಮಗಳನ್ನು ಜಾರಿಗೊಳಿಸಿದ ಕೆಲವೇ ಗಂಟೆಗಳ ನಂತರ ಹಂತ 4ರ ನಿರ್ಬಂಧಗಳನ್ನು ವಿಧಿಸುವ ನಿರ್ಧಾರ ಮಾಡಲಾಗಿದೆ.
ಪರಿಷ್ಕೃತ ಜಿಆರ್‌ಎಪಿ ವೇಳಾಪಟ್ಟಿಯ ಪ್ರಕಾರ, ದೆಹಲಿ, ಗುರುಗ್ರಾಮ, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರಗಳಲ್ಲಿನ 6ರಿಂದ 9 ಮತ್ತು 11ನೇ ತರಗತಿಗಳನ್ನು ಹಂತ 4ರ ನಿರ್ಬಂಧಗಳ ಅಡಿಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು.
ಹಂತ 4ರ ನಿರ್ಬಂಧಗಳ ಪೈಕಿ ಹೆದ್ದಾರಿಗಳು, ಮೇಲ್ಸೇತುವೆಗಳು, ವಿದ್ಯುತ್ ಮಾರ್ಗಗಳು ಮತ್ತು ಪೈಪ್‌ಲೈನ್‌ಗಳಂತಹ ಸಾರ್ವಜನಿಕ ಯೋಜನೆಗಳು ಸೇರಿದಂತೆ ಎಲ್ಲ ನಿರ್ಮಾಣ ಮತ್ತು ಕಟ್ಟಡ ನೆಲಸಮ ಚಟುವಟಿಕೆಗಳ ಮೇಲೆ ನಿಷೇಧವಿದೆ. ಅನಿವಾರ್ಯವಲ್ಲದ ಡೀಸೆಲ್ ಟ್ರಕ್‌ಗಳನ್ನು ದೆಹಲಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕ, ಪಾಲಿಕೆ ಮತ್ತು ಖಾಸಗಿ ಕಚೇರಿಗಳು ಶೇ50 ರಷ್ಟು ಸಿಬ್ಬಂದಿಗೆ ಮಾತ್ರ ಕಚೇರಿಗಳಲ್ಲಿ ಕೆಲಸ ಮಾಡಲು ಅನುಮತಿಸುವ ಬಗ್ಗೆ ನಿರ್ಧರಿಸಬೇಕು. ಉಳಿದ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಾರೆ. ಕಾಲೇಜುಗಳನ್ನು ಮುಚ್ಚುವುದು, ಅನಿವಾರ್ಯವಲ್ಲದ ವ್ಯವಹಾರಗಳು ಮತ್ತು ಬೆಸ-ಸಮ ವಾಹನ ನಿರ್ಬಂಧಗಳನ್ನು ಜಾರಿಗೊಳಿಸುವಂತಹ ಹೆಚ್ಚುವರಿ ಕ್ರಮಗಳನ್ನು ದೆಹಲಿ–ಎನ್‌ಸಿಆರ್ ವ್ಯಾಪ್ತಿಯ ರಾಜ್ಯಗಳು ಪರಿಗಣಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.