ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ಕೈಗೊಂಡಿದ್ದರೂ, ಕಾಂಗ್ರೆಸ್ ಪಕ್ಷ ತೆರಿಗೆ ವ್ಯವಸ್ಥೆಯಲ್ಲಿ ಇನ್ನಷ್ಟು ಬದಲಾವಣೆಯ ಅಗತ್ಯವಿದೆ ಎಂದಿದೆ.
ಇದೀಗ ಆಗಿರುವ ಪರಿಷ್ಕರಣೆಯನ್ನು ‘ಜಿಎಸ್‌ಟಿ 1.5’ ಎಂದು ಕರೆದಿರುವ ಕಾಂಗ್ರೆಸ್, ನಿಜವಾದ ‘ಜಿಎಸ್‌ಟಿ 2.0’ಗೆ ಕಾಯುವಿಕೆ ಮುಂದುವರಿದಿದೆ ಎಂದು ಹೇಳಿದೆ. ಜಿಎಸ್‌ಟಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು ಎಂದು ಪಕ್ಷವು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದ್ದಾರೆ.
ಜಿಎಸ್‌ಟಿ ದರ ಪರಿಷ್ಕರಣೆಯು ರಾಜ್ಯಗಳ ವರಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ರಾಜ್ಯಗಳ ಆರ್ಥಿಕ ಹಿತಾಸಕ್ತಿ ರಕ್ಷಣೆಗಾಗಿ 2024–25ನ್ನು ಆರಂಭಿಕ ವರ್ಷವಾಗಿ ಪರಿಗಣಿಸಿ ಐದು ವರ್ಷಗಳಿಗೆ ವಿಶೇಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
‘ಸರಳೀಕೃತ ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತಹ ತೆರಿಗೆ ವ್ಯವಸ್ಥೆ ಬೇಕು ಎಂದು ಕಾಂಗ್ರೆಸ್ ಪಕ್ಷ ತನ್ನ 2019 ಮತ್ತು 2024ರ ಚುನಾವಣಾ ಪ್ರಣಾಳಿಕೆಯಲ್ಲಿ ಒತ್ತಾಯಿಸಿತ್ತು. ಎಂಎಸ್‌ಎಂಇ ಮತ್ತು ಸಣ್ಣ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ದೂಡಿರುವ ಜಿಎಸ್‌ಟಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಆಗ್ರಹಿಸಿತ್ತು’ ಎಂದು ಹೇಳಿದ್ದಾರೆ.
‘2011ರಲ್ಲಿ ಅಂದಿನ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಜಿಎಸ್‌ಟಿ ಮಸೂದೆ ತಂದಾಗ ಬಿಜೆಪಿಯವರು ವಿರೋಧಿಸಿದ್ದರು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಜಿಎಸ್‌ಟಿಯನ್ನು ಬಲವಾಗಿ ವಿರೋಧಿಸಿದ್ದರು’ ಎಂದಿದ್ದಾರೆ.
‘ಇಂದು ಅದೇ ಬಿಜೆಪಿ, ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕಿ ದಾಖಲೆಯ ಜಿಎಸ್‌ಟಿ ಸಂಗ್ರಹಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ದೇಶದ ಇತಿಹಾಸದಲ್ಲಿ ರೈತರ ಮೇಲೆ ತೆರಿಗೆ ವಿಧಿಸಿದ್ದು ಇದೇ ಮೊದಲು. ಮೋದಿ ಸರ್ಕಾರ ಕೃಷಿ ಕ್ಷೇತ್ರದ ಕನಿಷ್ಠ 36 ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿದೆ’ ಎಂದು ಟೀಕಿಸಿದ್ದಾರೆ.
‘ಬಿಜೆಪಿ ಸರ್ಕಾರವು ಹಾಲು, ಮೊಸರು, ಹಿಟ್ಟು, ಧಾನ್ಯಗಳು, ಶಾಲಾ ಮಕ್ಕಳು ಬಳಸುವ ಪೆನ್ಸಿಲ್, ಪುಸ್ತಕಗಳ ಮೇಲೂ ತೆರಿಗೆ ವಿಧಿಸಿದೆ. ಅದಕ್ಕಾಗಿಯೇ ನಾವು ಬಿಜೆಪಿಯ ಈ ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ತೆರಿಗೆ’ ಎಂದು ಕರೆದಿದ್ದೆವು’ ಎಂದು ಖರ್ಗೆ ಹೇಳಿದ್ದಾರೆ.
ಮೋದಿ ಸರ್ಕಾರವು ಎಂಟು ವರ್ಷಗಳ ವಿಳಂಬದ ನಂತರ ಜಿಎಸ್‌ಟಿ ಕುರಿತಂತೆ ಗಾಢ ನಿದ್ರೆಯಿಂದ ಎಚ್ಚರಗೊಂಡು ದರ ಪರಿಷ್ಕರಣೆಯ ಬಗ್ಗೆ ಮಾತನಾಡಿರುವುದು ಒಳ್ಳೆಯ ಬೆಳವಣಿಗೆಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ತಾನು ಎಂಟು ವರ್ಷಗಳಿಂದ ನಡೆದು ಬಂದ ಹಾದಿ ತಪ್ಪಾಗಿದೆ ಎಂಬುದನ್ನು ಅರಿತುಕೊಂಡು ಸರ್ಕಾರ ‘ಯು ಟರ್ನ್’ ತೆಗೆದುಕೊಂಡಿರುವುದು ನನಗೆ ಸಂತಸ ಉಂಟುಮಾಡಿದೆಪಿ.ಚಿದಂಬರಂ ಕಾಂಗ್ರೆಸ್ ನಾಯಕ
ವರಮಾನ ನಷ್ಟ ಸರಿದೂಗಿಸಲು ಪರಿಹಾರ ನೀಡುವ ವ್ಯವಸ್ಥೆಯನ್ನು ಇನ್ನೂ ಐದು ವರ್ಷ ಮುಂದುವರಿಸಲು ರಾಜ್ಯಗಳು ಇಟ್ಟಿರುವ ಬೇಡಿಕೆ ಈಡೇರಿಲ್ಲಜೈರಾಮ್ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.