ನವದೆಹಲಿ: ಭಾರತೀಯರು ಹೆಚ್ಚು ಸ್ವದೇಶಿ ವಸ್ತುಗಳನ್ನು ಬಳಸಬೇಕು. ಜಿಎಸ್‌ಟಿ ಪರಿಷ್ಕರಣೆಯಿಂದ ವ್ಯಾಪಾರವು ಸುಲಭವಾಗಲಿದ್ದು, ಹೂಡಿಕೆದಾರರನ್ನು ಆಕರ್ಷಿಸಲು ನೆರವಾಗುತ್ತದೆ. ಇದರಿಂದ ದೇಶದ ಬೆಳವಣಿಗೆಯು ವೇಗ ಪಡೆದುಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇಂದು(ಸೆ.21) ಸಂಜೆ 5 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ಭಾರತೀಯರಿಗೆ ನವರಾತ್ರಿಯ ಮೊದಲ ದಿನದಿಂದಲೇ ‘ಜಿಎಸ್‌ಟಿ ಬಚತ್ ಉತ್ಸವ್’(ಜಿಎಸ್‌ಟಿ ಉಳಿಕೆ ಉತ್ಸವ) ಆರಂಭಗೊಳ್ಳಲಿದೆ. ₹ 12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿರುವುದು ಬಹುಪಾಲು ಜನರಿಗೆ ಡಬಲ್ ಧಮಾಕ. ಹಬ್ಬದ ಋತುವಿನಲ್ಲಿ ಎಲ್ಲರ ಸಂತೋಷವು ಜಾಸ್ತಿಯಾಗಲಿದೆ ಎಂದು ತಿಳಿಸಿದ್ದಾರೆ.
ದೇಶದ ಅಭಿವೃದ್ಧಿಯಲ್ಲಿ ಎಲ್ಲಾ ರಾಜ್ಯಗಳು ಕೂಡ ಸಮಪಾಲು ಹೊಂದಿವೆ. ‘ಆತ್ಮನಿರ್ಭರ ಭಾರತ’ ಅಡಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಿ ಮತ್ತು ಸ್ವದೇಶಿ ಅಭಿಯಾನವನ್ನು ಜಾರಿಯಲ್ಲಿರಿಸಿ. ಜನರು ಕೂಡ ಸ್ವದೇಶಿ ವಸ್ತುಗಳನ್ನು ಬಳಸಿ ಎಂದು ಕಿವಿಮಾತು ಹೇಳಿದ್ದಾರೆ.
‘ನವರಾತ್ರಿಯ ಮೊದಲ ದಿನವೇ ದೇಶವು ಆತ್ಮನಿರ್ಭರ ಭಾರತಕ್ಕಾಗಿ ಮಹತ್ವದ ಮತ್ತು ದೊಡ್ಡ ಹೆಜ್ಜೆಯೊಂದನ್ನು ಇಡುತ್ತಿದೆ. ನಾಳೆಯಿಂದ ಜಿಎಸ್‌ಟಿ ಪರಿಷ್ಕರಣೆ ಜಾರಿಯಾಗಲಿದೆ. ಇದರಿಂದ 375 ವಸ್ತುಗಳ ದರ ಇಳಿಕೆಯಾಗಲಿದೆ. ಬಡವರು, ಮಧ್ಯಮ ವರ್ಗ, ರೈತರು, ಯುವಕರು, ಮಹಿಳೆಯರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ನಿಮಗೆ ಬೇಕಾಗಿರುವ ವಸ್ತುವನ್ನು ಕೊಂಡುಕೊಳ್ಳುವುದು ಇನ್ನೂ ಸುಲಭವಾಗಲಿದೆ’ ಎಂದು ಮೋದಿ ನುಡಿದಿದ್ದಾರೆ.
ಭಾರತವು 2017ರಲ್ಲಿ ಜಿಎಸ್‌ಟಿ ಆರಂಭಿಸಿದಾಗ ಇತಿಹಾಸದಲ್ಲಿ ಹೊಸ ಬದಲಾವಣೆಯೊಂದು ಆರಂಭವಾಯಿತು. ಇದು ‘ಒಂದು ದೇಶ – ಒಂದು ತೆರಿಗೆ’ಯ ಕನಸನ್ನು ನನಸಾಗಿಸಿತು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.