ADVERTISEMENT

ಬಿಜೆಪಿ, ಕಾಂಗ್ರೆಸ್‌ ‘ಐ ಲವ್‌ ಯೂ- ಐ ಲವ್‌ ಯೂ’ ಆಟ ಆಡುತ್ತಿವೆ: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 10:12 IST
Last Updated 5 ನವೆಂಬರ್ 2022, 10:12 IST
   

ನವದೆಹಲಿ: ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿಕೊಂಡು ಗುಜರಾತ್‌ನಲ್ಲಿ ‘ಐ ಲವ್‌ ಯೂ- ಐ ಲವ್‌ ಯೂ’ ಆಟ ಆಡುತ್ತಿವೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ವ್ಯಂಗ್ಯವಾಡಿದ್ದಾರೆ.

ಇಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು. ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

‘ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪತಿ-ಪತ್ನಿ, ಸಹೋದರ-ಸಹೋದರಿ ಸಂಬಂಧ ಇದೆ. ನಿನ್ನೆ ಅಮಿತ್‌ ಶಾ ಅವರ ಸಂದರ್ಶನವೊಂದನ್ನು ನಾನು ನೋಡಿದೆ. ಅದರಲ್ಲಿ ಅವರು, ಗುಜರಾತ್‌ನಲ್ಲಿ ಸ್ಪರ್ಧೆ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತ್ರ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಕೂಡ ಇದೇ ರೀತಿ ವರ್ತನೆ ಮಾಡುತ್ತಿದೆ. ಕಾಂಗ್ರೆಸ್‌ ಒಂಥರಾ ಬಿಜೆಪಿಯ ಪತ್ನಿ ಇದ್ದ ಹಾಗೆ. ಅವರು ಸಂಪೂರ್ಣವಾಗಿ ಬಿಜೆಪಿಯ ಜೇಬಿನಲ್ಲಿಯೇ ಇದ್ದಾರೆ’ ಎಂದು ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

27 ವರ್ಷಗಳ ಬಿಜೆಪಿಯ ಆಡಳಿತದಿಂದ ಗುಜರಾತ್‌ನ ಜನ ಬೇಸತ್ತಿದ್ದಾರೆ. ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ ಎಂದು ಕೇಜ್ರಿವಾಲ್‌ ನುಡಿದಿದ್ದಾರೆ.

ಇದೇ ವೇಳೆ, ಆಮ್‌ ಅದ್ಮಿ ಪಕ್ಷದ ಪ್ರತಿನಿಧಿಗಳನ್ನು ಚರ್ಚೆಗೆ ಆಹ್ವಾನಿಸದಂತೆ ಬಿಜೆಪಿಯು ಎಲ್ಲಾ ಟಿವಿ ಚಾನೆಲ್‌ಗಳಿಗೆ ಬೆದರಿಕೆ ಹಾಕಿದೆ ಎಂದು ಅವರು ಆರೋಪಿಸಿದ್ದಾರೆ.

ಟಿವಿ ಚಾನೆಲ್‌ಗಳಲ್ಲಿ ಮನೀಶ್‌ ಸಿಸೋಡಿಯ ಬಗ್ಗೆ ನೀವು ಚರ್ಚೆ ಮಾಡುತ್ತಿರುವುದು ನೀವು ನೋಡಿರಬಹುದು. ಆದರೆ ಅಲ್ಲಿ ಆಮ್ ಆದ್ಮಿ ಪಕ್ಷದ ಪ್ರತಿನಿಧಿ ಇರುವುದಿಲ್ಲ. ಕೇವಲ ಬಿಜೆಪಿ ಹಾಗೂ ಕಾಂಗ್ರೆಸ್‌ನ ಪ್ರತಿನಿಧಿಗಳು ಇರುತ್ತಾರೆ. ಇದು ಒಂಥರಾ ಪತಿ-ಪತ್ನಿ, ಸಹೋದರ-ಸಹೋದರಿ ಸಂಬಂಧ ಇದ್ದ ಹಾಗೆ ಎಂದು ಕೇಜ್ರಿವಾಲ್‌ ತಮಾಷೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.