ADVERTISEMENT

ಗುಜರಾತ್‌ ಚುನಾವಣೆ: ಕಮಲಕ್ಕೆ ಕಾಂಗ್ರೆಸ್‌, ಪೊರಕೆ ‘ಕಡ್ಡಿ’ಯ ಸವಾಲು!

89 ಕ್ಷೇತ್ರಗಳಲ್ಲಿ ಮೊದಲ ಹಂತದ ‌ಮತದಾನ ಪ್ರಾರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2022, 3:36 IST
Last Updated 1 ಡಿಸೆಂಬರ್ 2022, 3:36 IST
   

ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯವಾದ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗಿದೆ. ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಅನುಕೂಲವಾತಾವರಣವಿದ್ದು, ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್‌ ತೆಳುವಾದ ಸವಾಲೊಡ್ಡುವ ನಿರೀಕ್ಷೆಯಿದೆ.

ಮೊದಲ ಹಂತದಲ್ಲಿ 19 ಜಿಲ್ಲೆಗಳ 89 ಸ್ಥಾನಗಳಿಗೆ ಮತದಾನ ನಡೆಯಲಿದ್ದು 788 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ದಕ್ಷಿಣ ಗುಜರಾತ್‌ ಮತ್ತು ಕುಚ್‌–ಸೌರಾಷ್ಟ್ರ ಪ್ರಾಂತ್ಯದ ಕ್ಷೇತ್ರಗಳಲ್ಲಿ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಇಲ್ಲಿವರೆಗೆ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಾಂಪ್ರದಾಯಿಕ ಸ್ಪರ್ಧೆ ಇತ್ತು. ಮೊದಲ ಆಮ್‌ ಆದ್ಮಿ ಪಕ್ಷ ಕಣದಲ್ಲಿ ಪ್ರಬಲ ಸ್ಪರ್ಧಿಯಾಗಿದ್ದು ರಾಜ್ಯದ 182 ಕ್ಷೇತ್ರಗಳಲ್ಲಿ 181ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ADVERTISEMENT

ಬಿಜೆಪಿ, ಕಾಂಗ್ರೆಸ್, ಎಎಪಿ ಸೇರಿದಂತೆ 36 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 339 ಪಕ್ಷೇತರ ಅಭ್ಯರ್ಥಿಗಳೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದರಲ್ಲಿ 70 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ಎಎ‍ಪಿ ಮುಖ್ಯಮಂತ್ರಿ ಅಭ್ಯರ್ಥಿ ಈಸುದಾನ್ ಗಢವಿ, ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ಸ್ಪರ್ಧಿಸಿರುವ ಕ್ಷೇತ್ರಗಳೂ ಇವೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾ ಜಡೇಜಾ, ಆರು ಬಾರಿ ಶಾಸಕರಾಗಿರುವ ಕುನ್ವರ್ಜಿ ಬವಲಿಯಾ, ಮೊರ್ಬಿ 'ಹೀರೋ' ಕಾಂತಿಲಾಲ್ ಅಮೃತಿಯಾ, ಶಾಸಕರಾದ ಹರ್ಷ ಸಂಘವಿ, ಪೂರ್ಣೇಶ್ ಮೋದಿ, ಮಾಜಿ ಸಚಿವ ಪುರುಷೋತ್ತಮ್ ಸೋಳಂಕಿ ಅವರು ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖರಾಗಿದ್ದಾರೆ.

ರಾಜ್ಯದ ಒಟ್ಟು 4.91 ಕೋಟಿ ಮತದಾರರ ಪೈಕಿ 2.39 ಕೋಟಿ ಮತದಾರರು ಮೊದಲ ಹಂತದಲ್ಲಿ ಹಕ್ಕು ಚಲಾವಣೆಗೆ ಸಜ್ಜಾಗಿದ್ದಾರೆ. ಇದೇ ಡಿ.5ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಡಿ.8ರಂದು ಮತ ಎಣಿಕೆ ನಡೆಯಲಿದೆ.

ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ಮೊದಲ ಹಂತದ ಪ್ರಚಾರವನ್ನು ಮುನ್ನಡೆಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಬಿಜೆಪಿ ನಾಯಕರು ಹಲವಾರು ಸಮಾವೇಶಗಳಲ್ಲಿ ಭಾಗಿಯಾಗಿ ಪ್ರಚಾರ ನಡೆಸಿದ್ದಾರೆ.

ಆಮ್‌ ಆದ್ಮಿ ಪಕ್ಷ, ಬಿಜೆಪಿ ವಿರುದ್ಧದ ಪ್ರಮುಖ ಸ್ಪರ್ಧಿಯಾಗಿ ತನ್ನನ್ನು ತಾನು ಬಿಂಬಿಸಿಕೊಂಡಿದ್ದು, ದೆಹಲಿ ಸಿಎಂ ಕೇಜ್ರಿವಾಲ್ ಜುಲೈನಿಂದ ಐದು ತಿಂಗಳಲ್ಲಿ ಇಡೀ ರಾಜ್ಯವನ್ನು ಸಂಚರಿಸಿ ಬೃಹತ್ ಅಭಿಯಾನವನ್ನು ನಡೆಸಿದ್ದಾರೆ.

ಅಸಮಾಧಾನವಿದ್ದರೂ ಬೇರೆ ಆಯ್ಕೆಯಿಲ್ಲ!
1998ರಿಂದಲೂ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಅಸಮಾಧಾನದ ಅಲೆ ಜೋರಾಗಿದೆ. ಆದಾಗ್ಯೂ ಬೇರೆ ಆಯ್ಕೆ ಇಲ್ಲವೆಂಬುದು ಬಹುತೇಕ ಮತದಾರರ ಮನದಾಳದ ಮಾತು. ಪಿಟಿಐನ ಗ್ರೌಂಡ್ ರಿಪೋರ್ಟ್ ಪ್ರಕಾರ, ಅನೇಕ ಮತದಾರ ಬಳಿ ಕುಂದುಕೊರತೆಗಳ ಪಟ್ಟಿಯೇ ಇದೆ.

ಪೋರಬಂದರ್‌ನ ತುಳಸಿದಾಸ್ ಲಖಾನಿ ಅಭಿವೃದ್ಧಿಗೆ ಮಾದರಿ ಎಂದು ಬಿಂಬಿತವಾಗಿರುವ ಗುಜರಾತ್‌ನ ವೈಫಲ್ಯಗಳನ್ನು ಹೇಳಿದ್ದಾರೆ. ಗುಜರಾತ್‌ನ ಪ್ರಮುಖ ಪಟ್ಟಣ ಅಹಮದಾಬಾದ್‌ನಿಂದ ಸುಮಾರು 400 ಕಿಮೀ ದೂರದಲ್ಲಿರುವ ವಿನೋದ್ ಗೋಪಾಲ್ ತಮ್ಮ ಹತಾಶೆಯನ್ನು ಪಿಟಿಐ ಬಳಿ ತೋಡಿಕೊಂಡಿದ್ದಾರೆ. ಇಷ್ಟಾಗಿಯೂ ಕಮಲ ಪಾಳಯ 2002ರಲ್ಲಿ ನರೇಂದ್ರ ಮೋದಿ ಗೆದ್ದ 127 ಸ್ಥಾನಗಳ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದೆ. ಆಮ್‌ ಆದ್ಮಿ 15–20 ಸ್ಥಾನಗಳನ್ನು ಪಡೆಯಬಹುದೆಂಬುದು ಸಮೀಕ್ಷೆಗಳ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.