ADVERTISEMENT

ಗುಜರಾತ್ ಚುನಾವಣೆ | ಮತದಾನದ ದಿನ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ: ಮಮತಾ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2022, 9:41 IST
Last Updated 5 ಡಿಸೆಂಬರ್ 2022, 9:41 IST
ಬೆಂಬಲಿಗರತ್ತ ಕೈಬೀಸಿದ ಪ್ರಧಾನಿ ಮೋದಿ (ಪಿಟಿಐ ಚಿತ್ರ)
ಬೆಂಬಲಿಗರತ್ತ ಕೈಬೀಸಿದ ಪ್ರಧಾನಿ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ಗುಜರಾತ್‌ ವಿಧಾನಸಭೆಗೆ ನಡೆದ ಎರಡನೇ ಹಂತದ ಮತದಾನದಂದು (ಡಿಸೆಂಬರ್‌ 5) ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಶೋ ನಡೆಸಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕಿಡಿಕಾರಿದ್ದಾರೆ.

ಅಹಮದಾಬಾದ್‌ನಲ್ಲಿ ಇಂದು (ಸೋಮವಾರ) ಮತದಾನ ಮಾಡಲು ಮತಗಟ್ಟೆಗೆ ನಡೆದು ಸಾಗಿದ ಪ್ರಧಾನಿ ಅವರು, ದಾರಿಯುದ್ದಕ್ಕೂ ನೆರೆದಿದ್ದ ಜನರತ್ತ ಕೈ ಬೀಸುತ್ತಾ ಸಾಗಿದ್ದರು.

ಮತದಾನದ ದಿನದಂದು ಪ್ರಧಾನಿ ಮೋದಿಯವರು ಬೆಂಬಲಿಗರತ್ತ ಕೈ ಬೀಸುತ್ತಾ ಸಾಗಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಂದಿನ ವರ್ಷ ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಯ ಲಾಂಛನದಲ್ಲಿಯೂ (ಲೋಗೊದಲ್ಲಿಯೂ) ಬಿಜೆಪಿ ಪಕ್ಷದ ಚಿಹ್ನೆಯಾದ 'ಕಮಲ'ವನ್ನು ಸೇರಿಸಲಾಗಿದೆ ಎಂದೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಆರೋಪಿಸಿದೆ.

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮೊದಲ ಹಂತದಲ್ಲಿ19 ಜಿಲ್ಲೆಗಳ 89 ಕ್ಷೇತ್ರಗಳಿಗೆ ಡಿಸೆಂಬರ್ 1ರಂದು ಮತದಾನ ನಡೆದಿದೆ. ಎರಡನೇ ಹಂತದಲ್ಲಿ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಇಂದು (ಡಿ.5) ಮತದಾನ ನಡೆಯುತ್ತಿದೆ.ಡಿಸೆಂಬರ್ 8ರಂದು ಮತ ಎಣಿಕೆ ನಡೆದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.