
ಅಹಮದಾಬಾದ್: ಗುಜರಾತ್ ಸರ್ಕಾರ ಬುಧವಾರ ₹4.08 ಲಕ್ಷ ಕೋಟಿ ಗಾತ್ರದ 2026–27ನೇ ಸಾಲಿನ ಆಯವ್ಯಯವನ್ನು ಮಂಡಿಸಿತು. ಕಳೆದ ಆಯವ್ಯಯಕ್ಕೆ ಹೋಲಿಸಿದರೆ ಈ ವರ್ಷ ಬಜೆಟ್ ಗಾತ್ರ ಶೇ 10.2ರಷ್ಟು ಹೆಚ್ಚಾಗಿದೆ.
‘ಒಲಿಂಪಿಕ್ಸ್‌ಗೆ ಅಹಮದಾಬಾದ್ ಸನ್ನದ್ಧ’ ಎಂಬ ಉದ್ಘೋಷ ಹಾಗೂ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ‘ಗುಜರಾತ್‌ನಲ್ಲೇ ವಿವಾಹವಾಗಿ’ ಎಂಬ ಅಭಿಯಾನದ ಘೋಷಣೆ, ಗಾಂಧಿನಗರದಲ್ಲಿ ನಮೋ ಕೇಂದ್ರ ಗ್ರಂಥಾಲಯ ಸ್ಥಾಪನೆಗೆ ₹100 ಕೋಟಿ ಒದಗಿಸಿರುವುದು ಈ ಬಾರಿಯ ವಿಶೇಷ.
ಗುಜರಾತ್‌ನ ಆರ್ಥಿಕ ಸಚಿವ ಕಾನುಭಾಯ್ ದೇಸಾಯಿ ಅವರು ವಿಧಾನಸಭೆಯಲ್ಲಿ ಕಳೆದ ಬಾರಿಗಿಂತ ₹37,803 ಕೋಟಿ ಹೆಚ್ಚು ಗಾತ್ರದ ಬಜೆಟ್ ಮಂಡಿಸಿದರು. ಆನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಾವುದೇ ಹೊಸ ತೆರಿಗೆ ವಿಧಿಸದ ಮತ್ತು ಹೆಚ್ಚಿಸದ ಸಮತೋಲಿತ ಆಯವ್ಯಯ ಇದು’ ಎಂದರು. ಕ್ರೀಡಾ ಮೂಲಸೌಕರ್ಯ ಸೃಷ್ಟಿಸಲು ₹1331 ಕೋಟಿ ಅನುದಾನ ನೀಡಲಾಗಿದೆ.
ಅಹಮದಾಬಾದ್ ನಗರವನ್ನು ಒಲಿಂಪಿಕ್ಸ್‌ಗೆ ಸಜ್ಜುಗೊಳಿಸಲು ₹500 ಕೋಟಿ ಒದಗಿಸಲಾಗಿದೆ. 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು 2036ರ ಒಲಿಂಪಿಕ್ಸ್ ತಯಾರಿಗಾಗಿ ವಿಶ್ವದರ್ಜೆಯ ಕ್ರೀಡಾ ಮೂಲಸೌಕರ್ಯ ಮತ್ತು ಆಧುನಿಕ ಸಾರಿಗೆ ಸೌಕರ್ಯ ಕಲ್ಪಿಸುವುದಕ್ಕಾಗಿ ಪ್ರತ್ಯೇಕ ನಿಧಿ ಮೀಸಲಿಡಲಾಗಿದೆ. ವಿಶ್ವಮಟ್ಟದ ಹಾಕಿ ಕ್ರೀಡಾಂಗಣಕ್ಕೆ ₹90 ಕೋಟಿ, ಗಾಂಧಿನಗರದಲ್ಲಿ ಅಥ್ಲೀಟ್‌ಗಳ ತರಬೇತಿಗಾಗಿ ಸುಸಜ್ಜಿತ ಕ್ರೀಡಾ ಕೇಂದ್ರ ( ಪ್ಯಾರಾ ಹೈ ಪರ್ಫಾರ್ಮೆನ್ಸ್ ಸೆಂಟರ್) ನಿರ್ಮಾಣಕ್ಕೆ ₹100 ಕೋಟಿ, ಗಾಂಧಿನಗರದ ಕರಯಿನಲ್ಲಿ ಒಲಿಂಪಿಕ್ಸ್ ದರ್ಜೆಯ ಮೂಲಸೌಕರ್ಯ ಕಲ್ಪಿಸಲು ₹100 ಕೋಟಿ ಮೀಸಲಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.