ADVERTISEMENT

ಗುಜರಾತ್‌ನಲ್ಲಿ ಸಂಪುಟ ಕಗ್ಗಂಟು: ಸಚಿವ ಸ್ಥಾನಕ್ಕಾಗಿ ಜಟಾಪಟಿ ತೀವ್ರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 16:56 IST
Last Updated 15 ಸೆಪ್ಟೆಂಬರ್ 2021, 16:56 IST
ಭೂಪೇಂದ್ರ
ಭೂಪೇಂದ್ರ    

ಗಾಂಧಿನಗರ: ಗುಜರಾತ್‌ನ ಹೊಸ ಸಚಿವ ಸಂಪುಟ ರಚನೆಯ ವಿಚಾರವು ಬಿಜೆಪಿ ಮುಖಂಡರ ನಡುವೆ ಜಟಾಪಟಿಗೆ ಕಾರಣವಾಗಿದೆ.ಹಾಗಾಗಿ, ಬುಧವಾರ ನಿಗದಿಯಾಗಿದ್ದನೂತನ ಸಚಿವರ ಪ್ರಮಾಣ ವಚನಸ್ವೀಕಾರ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮವನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಆದರೆ ಗುರುವಾರವೂ ಕಾರ್ಯಕ್ರಮ ನಡೆಯುವುದು ಅನಿಶ್ಚಿತವಾಗಿದೆ.

ನಿಕಟಪೂರ್ವ ಮುಖ್ಯಮಂತ್ರಿ ವಿಜಯ ರೂಪಾಣಿ ಅವರ ಸಂಪುಟದಲ್ಲಿ ಇದ್ದಬಹುತೇಕ ಮಂದಿಯನ್ನು ಭೂಪೇಂದ್ರ ಪಟೇಲ್ ಅವರು ಕೈಬಿಟ್ಟಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಮಾಜಿ ಸಚಿವರು, ಬುಧವಾರ ಇಲ್ಲಿನ ಪಕ್ಷದ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಇಲ್ಲಿನ ರಾಜಭವನದಲ್ಲಿ ಬುಧವಾರ ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ನಡೆಯಬೇಕಿತ್ತು. ಇದಕ್ಕಾಗಿ ದೊಡ್ಡ ಹೋರ್ಡಿಂಗ್‌ಗಳು ಮತ್ತು ಪೋಸ್ಟರ್‌ಗಳನ್ನು ಅಳವಡಿಸಲಾಗಿತ್ತು. ಅಲ್ಲದೆ, ರಾಜಭವನವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಆದರೆ ರೂಪಾಣಿ ಸಂಪುಟದಲ್ಲಿದ್ದ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಕೆಲವರು ಪ್ರತಿಭಟನೆ ನಡೆಸಿದ ಕಾರಣ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು.

ADVERTISEMENT

ಕಾರ್ಯಕ್ರಮ ರದ್ದಾದ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರು ಪೋಸ್ಟರ್‌ ಮತ್ತು ಹೋರ್ಡಿಂಗ್‌ಗಳನ್ನು ತೆಗೆದು ಹಾಕಿದ್ದಾರೆ. ಅಸಮಾಧಾನಗೊಂಡಿದ್ದ ಪಕ್ಷದ ನಾಯಕರ ಜತೆಗೆ ಭೂಪೇಂದ್ರ ಪಟೇಲ್ ಅವರು ಸಮಾಲೋಚನೆ ನಡೆಸಿ, ಗುರುವಾರ ಮಧ್ಯಾಹ್ನಕ್ಕೆ ಕಾರ್ಯಕ್ರಮ ನಿಗದಿ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಗುರುವಾರದ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಪಕ್ಷದ ಕೇಂದ್ರ ಕಚೇರಿ, ರಸ್ತೆಗಳು ಮತ್ತು ರಾಜಭವನದಲ್ಲಿ ಹಾಕಲಾಗಿದೆ. ಆದರೆ ಪಕ್ಷದ ಕಚೇರಿ ಬಳಿ ಮತ್ತೆ ಜಟಾಪಟಿ ಉಂಟಾದ ಕಾರಣ ಪೋಸ್ಟರ್‌ಗಳನ್ನು ಹರಿದುಹಾಕಲಾಯಿತು. ಗುರುವಾರ ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಪಕ್ಷವು ಟ್ವೀಟ್ ಮಾಡಿದೆ.

ಬುಧವಾರದ ಕಾರ್ಯಕ್ರಮದಲ್ಲಿ 20 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದರು. ಇವರಲ್ಲಿ ಬಹುತೇಕ ಮಂದಿ ಇದೇ ಮೊದಲ ಬಾರಿ ಶಾಸಕರಾದವರು. ಭೂಪೇಂದ್ರ ಅವರ ಸಂಪುಟದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಪಕ್ಷದ ಹಿರಿಯ ಮುಖಂಡರು ಆರೋಪಿಸಿದ್ದಾರೆ. ಕಾರ್ಯಕ್ರಮ ರದ್ದಾದ ನಂತರ ಒಂದು ಬಣದ ನಾಯಕರು, ವಿಜಯ ರೂಪಾಣಿ ಅವರ ಮನೆಗೆ ಹೋಗಿ ಮಾತುಕತೆ ನಡೆಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಭೂಪೇಂದ್ರ ಪಟೇಲ್ ಅವರು ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದರು. ಸಚಿವ ಸ್ಥಾನವನ್ನು ತೊರೆಯುವಂತೆ ಬಹುತೇಕ ಎಲ್ಲಾ ಸಚಿವರಿಗೆ ಅಮಿತ್ ಶಾ ಅವರು ಸೋಮವಾರವೇ ಸೂಚನೆ ನೀಡಿದ್ದರು. ನೂತನ ಸಚಿವರ ಪಟ್ಟಿಯನ್ನೂ ಶಾ ಅವರೇ ಅಂತಿಮಗೊಳಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.