ADVERTISEMENT

ಅಸ್ಸಾಂ: ಜಾಮೀನು ಮಂಜೂರಾದ ಬೆನ್ನಲ್ಲೇ ಮತ್ತೆ ಜಿಗ್ನೇಶ್‌ ಮೇವಾನಿ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಏಪ್ರಿಲ್ 2022, 11:38 IST
Last Updated 25 ಏಪ್ರಿಲ್ 2022, 11:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟಿಸಿದ ಪ್ರಕರಣದಲ್ಲಿ ಸೋಮವಾರ ಜಾಮೀನು ಪಡೆದ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಪುನಃ ಬಂಧಿಸಿದ್ದಾರೆ.

ಬರ್ಪೆಟಾ ಪೊಲೀಸರು ಶಾಸಕ, ದಲಿತ ನಾಯಕ ಜಿಗ್ನೇಶ್‌ ಮೇವಾನಿ ಅವರನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ. ಆದರೆ, ಯಾವ ಪ್ರಕರಣದಲ್ಲಿ ಅವರನ್ನು ಮತ್ತೆ ಬಂಧಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ.

ಬರ್ಪೆಟಾ ಜಿಲ್ಲೆಯಲ್ಲಿ ಜಿಗ್ನೇಶ್‌ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ADVERTISEMENT

ಟ್ವೀಟ್‌ ಪ್ರಕರಣದಲ್ಲಿ ಜಾಮೀನು ಮಂಜೂರಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಜಿಗ್ನೇಶ್‌, 'ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪಿತೂರಿಯಾಗಿದೆ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಈ ರೀತಿ ಮಾಡಲಾಗಿದೆ. ಅವರು ಇಂಥದ್ದನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಇದೇ ರೀತಿ ರೋಹಿತ್‌ ವೇಮುಲಗೆ ಮಾಡಿದರು, ಚಂದ್ರಶೇಖರ್‌ ಆಜಾದ್‌ ಅವರಿಗೂ ಹೀಗೆ ಮಾಡಿದರು, ಈಗ ಅವರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ' ಎಂದು ಆರೋಪಿಸಿದರು.

ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೊಕ್ರಜಾರ್‌ನ ಕೋರ್ಟ್‌, ಹಲವು ಷರತ್ತುಗಳೊಂದಿಗೆ ಜಿಗ್ನೇಶ್‌ ಅವರಿಗೆ ಇಂದು ಜಾಮೀನು ಮಂಜೂರು ಮಾಡಿದೆ.

ಏಪ್ರಿಲ್‌ 18ರಂದು ಜಿಗ್ನೇಶ್‌ ಅವರು ಮಾಡಿರುವ ಟ್ವೀಟ್‌ಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. 'ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ದೇವರಾಗಿ ಕಾಣುತ್ತಾರೆ ಹಾಗೂ ಪೂಜಿಸುತ್ತಾರೆ. ಕೋಮು ಗಲಭೆ ನಡೆದಿರುವ ಹಿಮ್ಮತ್‌ನಗರ, ಕಂಭಾತ್‌ ಹಾಗೂ ವೆರಾವಲ್‌ನಲ್ಲಿ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಪ್ರಧಾನಿ ಏಪ್ರಿಲ್‌ 20ಕ್ಕೆ ಗುಜರಾತ್‌ಗೆ ಭೇಟಿ ನೀಡಿದಾಗ ಆಗ್ರಹಿಸಬೇಕು' ಎಂದು ಟ್ವೀಟಿನಲ್ಲಿ ಕಂಡಿರುವುದಾಗಿ ಅಸ್ಸಾಂ ಕೊಕ್ರಜಾರ್‌ನ ಅನುಪ್‌ ಕುಮಾರ್‌ ಡೇ ದೂರಿನಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.