ADVERTISEMENT

ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಐದು ದಿನ ಪೊಲೀಸ್ ಕಸ್ಟಡಿಗೆ: ಅಸ್ಸಾಂ ಕೋರ್ಟ್‌

ಪಿಟಿಐ
Published 26 ಏಪ್ರಿಲ್ 2022, 13:04 IST
Last Updated 26 ಏಪ್ರಿಲ್ 2022, 13:04 IST
ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ
ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ   

ಬರ್ಪೆಟಾ: ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಅವರನ್ನು ಅಸ್ಸಾಂ ಬರ್ಪೆಟಾ ಜಿಲ್ಲಾ ನ್ಯಾಯಾಲಯವು ಐದು ದಿನಗಳವರೆಗೂ ಪೊಲೀಸ್‌ ಕಸ್ಟಡಿಗೆ ನೀಡಿದೆ. ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ಕೋರ್ಟ್‌ ಮಂಗಳವಾರ ಆದೇಶ ನೀಡಿದೆ.

ಐಪಿಸಿ ಸೆಕ್ಷನ್‌ 294 (ಸಾರ್ವಜನಿಕವಾಗಿ ಅಶ್ಲೀಲ ಪದಗಳ ಬಳಕೆ), 323 (ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವುದು), 353 (ಕರ್ತವ್ಯನಿರತ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ) ಹಾಗೂ 354ರ ಅಡಿಯಲ್ಲಿ ಜಿಗ್ನೇಶ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಆರೋಪದಡಿ ಮೆವಾನಿ ಅವರನ್ನು ಅಸ್ಸಾಂನ ಪೊಲೀಸರು ಏಪ್ರಿಲ್‌ 19ರಂದು ಗುಜರಾತ್‌ನ ಪಾಲನ್ಪುರದಿಂದ ಬಂಧಿಸಿದ್ದರು. ಜಿಗ್ನೇಶ್‌ ಏಪ್ರಿಲ್‌ 18ರಂದು ಮಾಡಿದ್ದ ಎರಡು ಟ್ವೀಟ್‌ಗಳ ವಿರುದ್ಧ ಅಸ್ಸಾಂನ ಕೊಕ್ರಜಾರ್‌ನಲ್ಲಿ ಅನುಪ್‌ ಕುಮಾರ್‌ ಡೇ ಎಂಬುವವರು ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ಸೋಮವಾರ ಜಿಗ್ನೇಶ್‌ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ADVERTISEMENT

ಆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡ ಬೆನ್ನಲ್ಲೇ ಜಿಗ್ನೇಶ್‌ ಅವರನ್ನು ಬರ್ಪೆಟಾ ಪೊಲೀಸರು ಬಂಧಿಸಿದ್ದರು.

ಗುವಾಹಟಿ ವಿಮಾನ ನಿಲ್ದಾಣದಿಂದ ಜಿಗ್ನೇಶ್ ಅವರನ್ನು ಕೋಕ್ರಜಾರ್‌ಗೆ ಕರೆತರುವಾಗ ಪೊಲೀಸರ ತಂಡದಲ್ಲಿದ್ದ ಮಹಿಳಾ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಬರ್ಪೆಟಾದಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.