ADVERTISEMENT

ನಿಮಗೆ ರಾವಣನ ಹಾಗೆ 100 ತಲೆ ಇದೆಯೇ?: ಮೋದಿ ಬಗ್ಗೆ ಖರ್ಗೆ ಹೇಳಿಕೆಗೆ ಬಿಜೆಪಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ನವೆಂಬರ್ 2022, 10:42 IST
Last Updated 29 ನವೆಂಬರ್ 2022, 10:42 IST
ಮಲ್ಲಿಕಾರ್ಜುನ ಖರ್ಗೆ (ಕಡತ ಚಿತ್ರ)
ಮಲ್ಲಿಕಾರ್ಜುನ ಖರ್ಗೆ (ಕಡತ ಚಿತ್ರ)   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಾವಣ‘ ಎಂದು ಸಂಬೋಧಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತ ಪ‍ಡಿಸಿದೆ.

‘ಖರ್ಗೆಯವರು ಗುಜರಾತ್‌ನ ಪುತ್ರನನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ‘ ಎಂದು ಬಿಜೆಪಿ ಕಿಡಿಕಾರಿದೆ.

ಅಹಮದಾಬಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಖರ್ಗೆ, ‘ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳು. ಆದರೆ ಅವರು ತಮ್ಮ ಕೆಲಸವನ್ನು ಮರೆತು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಪ್ರತೀ ಬಾರಿಯೂ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ನೀವು ಯಾರನ್ನೂ ನೋಡಬೇಡಿ, ಮೋದಿಯನ್ನು ನೋಡಿ ಮತ ಹಾಕಿ ಎಂದು ಹೇಳುತ್ತಾರೆ. ಎಷ್ಟು ಬಾರಿ ನಿಮ್ಮ ಮುಖ ನೋಡಬೇಕು? ನಿಮಗೆ ಎಷ್ಟು ಅವತಾರ ಇದೆ? ನಿಮಗೇನು ರಾವಣನ ಹಾಗೆ 100 ತಲೆ ಇದೆಯೇ?‘ ಎಂದು ಖರ್ಗೆ ಪ್ರಶ್ನೆ ಮಾಡಿದ್ದರು.

ADVERTISEMENT

ಖರ್ಗೆಯವರ ಈ ಮಾತಿಗೆ ಪ್ರೇಕ್ಷಕರಿಂದ ಚಪ್ಪಾಳೆ, ಶಿಳ್ಳೆಯ ಅನುಮೋದನೆ ಲಭಿಸಿತ್ತು.

‘ಮೋದಿಯವರ ಹೆಸರಲ್ಲಿ ಮತ ಕೊಡಿ ಎಂದು ಹೇಳುವುದನ್ನು ನಾನು ನೋಡುತ್ತಿದ್ದೇನೆ. ಪುರಸಭೆ, ನಗರಸಭೆ ಅಥವಾ ರಾಜ್ಯ ಚುನಾವಣೆಯೇ ಆಗಿರಲಿ ಎಲ್ಲದಕ್ಕೂ ಮೋದಿ ನೋಡಿ ಮತ ಕೊಡಿ ಎಂದು ಹೇಳುತ್ತಿದ್ದಾರೆ. ಮತ ಕೇಳಬೇಕಾದುದ್ದು ಅಭ್ಯರ್ಥಿಯ ಹೆಸರಲ್ಲಿ. ನಗರಸಭೆಗೆ ಏನು ಮೋದಿ ಬರುತ್ತಾರೆಯೇ? ನಿಮಗೆ ಅಗತ್ಯ ಇದ್ದಾಗ ಅವರು ಸಿಗುತ್ತಾರೆಯೆ?‘ ಎಂದು ಖರ್ಗೆ ಪ್ರಶ್ನಿಸಿದ್ದರು.

ಖರ್ಗೆಯವರ ‘ರಾವಣ‘ ಹೇಳಿಕೆಗೆ ಬಿಜೆ‍ಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್‌ ಮಾಳವೀಯ ತಿರುಗೇಟು ನೀಡಿದ್ದಾರೆ.

‘ಗುಜರಾತ್‌ ಚುನಾವಣೆಯ ಬಿಸಿಯನ್ನು ತಾಳಲಾಗುತ್ತಿಲ್ಲ. ಕಾಂಗ್ರೆಸ್‌ ಅಧ್ಯಕ್ಷ ತಮ್ಮ ಮಾತಿನ ಮೇಲೆ ಹಿಡಿತ ಕಳೆದುಕೊಂಡು, ಪ್ರಧಾನಿ ನರೇಂದ್ರ ಮೋದಿಯನ್ನು ರಾವಣ ಎಂದು ಕರೆದಿದ್ದಾರೆ. ಸಾವಿನ ವ್ಯಾಪಾರಿಯಿಂದ ಆರಂಭವಾಗಿ ಈಗ ರಾವಣ ಎಂದು ಕರೆಯುವವರೆಗೆ ಬಂದು ನಿಂತಿದೆ. ಕಾಂಗ್ರೆಸ್‌ ಗುಜರಾತ್‌ನ ಪುತ್ರನನ್ನು ಅವಮಾನಿಸುತ್ತಲೇ ಬಂದಿದೆ‘ ಎಂದು ಮಾಳವೀಯ ಟ್ವೀಟ್‌ ಮಾಡಿದ್ದಾರೆ.

2007ರ ಗುಜರಾತ್‌ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯೊಂದರಲ್ಲಿ, 2002ರ ಗುಜರಾತ್‌ ಹಿಂಸಾಚಾರವನ್ನು ಉಲ್ಲೇಖಿಸಿ, ಅಂದಿನ ಗುಜರಾತ್‌ ಪ್ರಧಾನಿ ನರೇಂದ್ರ ಮೋದಿ ಅವರನ್ನು, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ‘ಸಾವಿನ ವ್ಯಾಪಾರಿ‘ ಎಂದು ಟೀಕಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಗುಜರಾತ್‌ ವಿಧಾನಸಭೆಗೆ ಡಿಸೆಂಬರ್‌ 1 ಹಾಗೂ 4 ರಂದು ಮತದಾನ ನಡೆಯಲಿದ್ದು, ಡಿಸೆಂಬರ್‌ 8ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.