ADVERTISEMENT

ಗುಜರಾತ್‌ನ ವಡೋದರಾದಲ್ಲಿ ಸೇತುವೆ ಕುಸಿತ: 10 ಜನರ ಸಾವು

ಪಿಟಿಐ
ಏಜೆನ್ಸೀಸ್
Published 9 ಜುಲೈ 2025, 15:16 IST
Last Updated 9 ಜುಲೈ 2025, 15:16 IST
<div class="paragraphs"><p>ಗುಜರಾತ್‌ನ ವಡೋದರಾದಲ್ಲಿ ಮಹಿಸಾಗರ ನದಿಗೆ ಕಟ್ಟಲಾಗಿರುವ ಗಂಭೀರ ಸೇತುವೆ ಕುಸಿದ ಸಂದರ್ಭದಲ್ಲಿ ಸಿಲುಕಿಕೊಂಡಿರುವ ಟ್ರಕ್‌</p></div>

ಗುಜರಾತ್‌ನ ವಡೋದರಾದಲ್ಲಿ ಮಹಿಸಾಗರ ನದಿಗೆ ಕಟ್ಟಲಾಗಿರುವ ಗಂಭೀರ ಸೇತುವೆ ಕುಸಿದ ಸಂದರ್ಭದಲ್ಲಿ ಸಿಲುಕಿಕೊಂಡಿರುವ ಟ್ರಕ್‌

   

ಪಿಟಿಐ ಚಿತ್ರ

ವಡೋದರಾ (ಪಿಟಿಐ): ಗುಜರಾತಿನ ವಡೋದರಾ ಜಿಲ್ಲೆಯಲ್ಲಿ ನಾಲ್ಕು ದಶಕಗಳಷ್ಟು ಹಳೆಯದಾದ ‘ಗಂಭೀರ’ ಸೇತುವೆ ಬುಧವಾರ ಬೆಳಿಗ್ಗೆ ಕುಸಿದ ಪರಿಣಾಮ ಒಡಹುಟ್ಟಿದ ಇಬ್ಬರು ಮಕ್ಕಳು ಸೇರಿದಂತೆ ಹತ್ತು ಮಂದಿ ಮೃತಪಟ್ಟಿದ್ದಾರೆ. ಇತರ ಒಂಬತ್ತು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಜಿಲ್ಲೆಯ ಪಾದರಾ ನಗರದಲ್ಲಿ ಮಹಿಸಾಗರ್‌ ನದಿ ಮೇಲೆ ಈ ಸೇತುವೆ ನಿರ್ಮಿಸಲಾಗಿದೆ. ಕೇಂದ್ರ ಗುಜರಾತ್‌ ಮತ್ತು ಸೌರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಇದಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ (ವಡೋದರಾ ಗ್ರಾಮೀಣ) ರೋಹನ್‌ ಆನಂದ್‌ ಹೇಳಿದರು. 

ಬೆಳಿಗ್ಗೆ 7.30ರ ಸುಮಾರಿಗೆ ಸೇತುವೆಯ 10ರಿಂದ 15 ಮೀಟರ್‌ ಉದ್ದದ ಸ್ಲ್ಯಾಬ್‌ (ಎರಡು ಕಂಬಗಳ ನಡುವಿನ) ಕುಸಿದು, ದುರಂತ ಸಂಭವಿಸಿದೆ. ಈ ವೇಳೆ ಸೇತುವೆ ಮೇಲೆ ಸಾಗುತ್ತಿದ್ದ ಕೆಲ ವಾಹನಗಳು ನದಿಗೆ ಬಿದ್ದಿವೆ ಎಂದು ಅವರು ವಿವರಿಸಿದರು.  

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೋಟ್‌ಗಳು, ಈಜುಪಟುಗಳು ಮತ್ತು ಸ್ಥಳೀಯ ಈಜುಗಾರರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಎನ್‌ಡಿಆರ್‌ಎಫ್‌ ತಂಡ ಸಹ ಸಾಥ್‌ ನೀಡಿತು. ರಕ್ಷಿಸಿರುವ ಒಂಬತ್ತು ಜನರ ಪೈಕಿ ಐದು ಜನರನ್ನು ಇಲ್ಲಿನ ಎಸ್ಎಸ್‌ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನದಿಗೆ ಬಿದ್ದ ವಾಹನಗಳು:

ಸೇತುವೆ ಕುಸಿದ ಪರಿಣಾಮ ಎರಡು ಟ್ರಕ್‌, ಎರಡು ವ್ಯಾನ್‌ಗಳು, ಒಂದು ಆಟೊರಿಕ್ಷಾ ಮತ್ತು ಒಂದು ದ್ವಿಚಕ್ರ ವಾಹನ ಸೇತುವೆಯಿಂದ ಕೆಳಗೆ ನದಿಗೆ ಉರುಳಿದವು. ಬೀಳುವ ಹಂತದಲ್ಲಿದ್ದ ಇತರ ಎರಡು ವಾಹನಗಳನ್ನು ರಕ್ಷಿಸಲಾಯಿತು ಎಂದು ವಡೋದರಾದ ಜಿಲ್ಲಾಧಿಕಾರಿ ಅನಿಲ್‌ ಧಮೇಲಿಯ ಮಾಹಿತಿ ನೀಡಿದರು. 

ನದಿಗೆ ಬಿದ್ದ ದ್ವಿಚಕ್ರ ವಾಹನದಲ್ಲಿದ್ದ ಮೂವರು ಈಜಿಕೊಂಡು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದೂ ಅವರು ವಿವರಿಸಿದರು. 

ತನಿಖೆಗೆ ಆದೇಶ:

ಸೇತುವೆ ಕುಸಿತಕ್ಕೆ ಸಂಬಂಧಿಸಿದತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗುಜರಾತಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ರಾಜ್ಯ ರಸ್ತೆ ಮತ್ತು ಕಟ್ಟಡ ನಿರ್ಮಾಣ ಇಲಾಖೆಗೆ ಆದೇಶಿಸಿದ್ದಾರೆ. 

ಇಲಾಖೆಯ ಹಿರಿಯರು ಮತ್ತು ಖಾಸಗಿ ತಜ್ಞ ಎಂಜಿನಿಯರ್‌ಗಳ ತಂಡವನ್ನು ರಚಿಸುವಂತೆ ಸೂಚಿಸಿರುವ ಸಿ.ಎಂ, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸುವಂತೆ ಹೇಳಿದ್ದಾರೆ. ಅಲ್ಲದೆ ಸೇತುವೆ ಕುಸಿತಕ್ಕೆ ಕಾರಣ ಮತ್ತು ಇತರ ತಾಂತ್ರಿಕ ಮಾಹಿತಿಗಳನ್ನು ಒಳಗೊಂಡ ಪ್ರಾಥಮಿಕ ವರದಿ ಸಲ್ಲಿಸುವಂತೆಯೂ ಅವರು ನಿರ್ದೇಶಿಸಿದ್ದಾರೆ.

ಪರಿಹಾರ ಘೋಷಣೆ

ದುರಂತದಲ್ಲಿ ಮೃತಪಟ್ಟವರ ಕುರಿತು ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬದವರಿಗೆ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹50000 ಪರಿಹಾರವನ್ನು ಪಿಎಂಎನ್‌ಆರ್‌ಎಫ್‌ ನಿಧಿ ಮೂಲಕ ಘೋಷಿಸಿದ್ದಾರೆ ಎಂದು ಪ್ರಧಾನಿ ಕಚೇರಿ ‘ಎಕ್ಸ್‌’ನಲ್ಲಿ ತಿಳಿಸಿದೆ.  ಗುಜರಾತ್‌ ಮುಖ್ಯಮಂತ್ರಿ ಭೂಪೇಂದರ್‌ ಪಟೇಲ್‌ ಅವರು ಮೃತರ ಕುಟುಂಬದವರಿಗೆ ತಲಾ ₹4 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹50000 ಆರ್ಥಿಕ ನೆರವು ಘೋಷಿಸಿದ್ದಾರೆ.   

ಹಿಂದಿನ ಕಹಿ ಘಟನೆ

ಪಶ್ಚಿಮ ಗುಜರಾತ್‌ನ ಮಚ್ಚು ನದಿ ಮೇಲೆ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ 2022ರ ಅಕ್ಟೋಬರ್ 30ರಂದು ಮುರಿದು ಬಿದ್ದು ಸುಮಾರು 135 ಮಂದಿ ಮೃತಪಟ್ಟಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.