ADVERTISEMENT

ಗುಜರಾತ್‌ನಲ್ಲಿ ಭ್ರಷ್ಟಾಚಾರ ಕೊನೆಗೊಳಿಸಲು ಅವಕಾಶ ನೀಡಿ: ಕೇಜ್ರಿವಾಲ್‌ ಮನವಿ

ಪಿಟಿಐ
Published 3 ಏಪ್ರಿಲ್ 2022, 13:07 IST
Last Updated 3 ಏಪ್ರಿಲ್ 2022, 13:07 IST
ಎಎಪಿ ಮಖ್ಯಸ್ಥ ಅರವಿಂದ ಕೇಜ್ರಿವಾಲ್‌, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್‌ ಶನಿವಾರ ಅಹಮದಾಬಾದ್‌ನಲ್ಲಿ ರೋಡ್‌ ಷೋ ನಡೆಸಿದರು –ಎಎಫ್‌ಪಿ ಚಿತ್ರ
ಎಎಪಿ ಮಖ್ಯಸ್ಥ ಅರವಿಂದ ಕೇಜ್ರಿವಾಲ್‌, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್‌ ಶನಿವಾರ ಅಹಮದಾಬಾದ್‌ನಲ್ಲಿ ರೋಡ್‌ ಷೋ ನಡೆಸಿದರು –ಎಎಫ್‌ಪಿ ಚಿತ್ರ   

ಅಹಮದಾಬಾದ್‌: ಪಂಜಾಬ್‌ನಲ್ಲಿ ಯಶಸ್ವಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಆಮ್‌ ಆದ್ಮಿ ಪಕ್ಷ (ಎಎಪಿ) ಈಗ ಗುಜರಾತ್‌ ಅನ್ನು ಮುಂದಿನ ಗುರಿಯಾಗಿಸಿಕೊಂಡಿದೆ. ‘ಎಎಪಿಗೆ ಒಂದು ಅವಕಾಶ ಕೊಡಿ’ ಎಂದು ಗುಜರಾತ್ ಜನರಿಗೆ ಮನವಿ ಮಾಡಿದೆ.

ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಶನಿವಾರ ಅಹಮದಾಬಾದ್‌ನಲ್ಲಿ ‘ತಿರಂಗಾ ಗೌರ್‌ ಯಾತ್ರಾ’ ಹೆಸರಿನಲ್ಲಿ ರೋಡ್‌ ಷೋ ನಡೆಸುವ ಮೂಲಕ ಚುನಾವಣಾ ಸಿದ್ಧತೆಗೆ ಚಾಲನೆ ನೀಡಿದರು.

ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಪ್ರಧಾನಿ ಮೋದಿ ತವರು ರಾಜ್ಯವಾದ ಗುಜರಾತ್‌ನಲ್ಲಿ ಭ್ರಷ್ಟಾಚಾರಕ್ಕೆ ಅಂತ್ಯವಾಡುವ ವಾಗ್ದಾನ ಮಾಡಿದರು. ‘ನಾವು ಇಲ್ಲಿಗೆ ಬಿಜೆಪಿ ಅಥವಾ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ಬಂದಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕು ಮತ್ತು ಇಲ್ಲಿನ ಜನರನ್ನು ಗೆಲ್ಲಿಸಬೇಕು ಎಂದು ಬಂದಿದ್ದೇವೆ’ ಎಂದು ಕೇಜ್ರಿವಾಲ್‌ ಹೇಳಿದರು.

ADVERTISEMENT

‘ಬಿಜೆಪಿಗೆ 25 ವರ್ಷ ಸಮಯ ಕೊಟ್ಟಿದ್ದೀರಿ. ಈಗ ನಮಗೆ ಒಂದು ಅವಕಾಶ ಕೊಡಿ. ದೆಹಲಿ, ಪಂಜಾಬ್‌ನಲ್ಲಿ ಅವಕಾಶ ನೀಡಿದ್ದೀರಿ. ಈಗ ಗುಜರಾತ್‌ನಲ್ಲೂ ಕೊಡಿ. ರಾಜ್ಯದ 6.5 ಕೋಟಿ ಜನರು ಒಟ್ಟುಗೂಡಿ ರಾಜ್ಯವನ್ನು ಮುನ್ನಡೆಸೋಣ’ ಎಂದು ಕರೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ 25 ವರ್ಷದಿಂದ ಅಧಿಕಾರದಲ್ಲಿದೆ. ಅದು, ಸಾಕಷ್ಟು ದೀರ್ಘ ಅವಧಿ. ಆದರೆ, ಭ್ರಷ್ಟಾಚಾರ ಕೊನೆಗೊಂಡಿಲ್ಲ. ಬಿಜೆಪಿಯ ಅಹಂಕಾರ ಹೆಚ್ಚಿದೆ. ಈಗ ಎಎಪಿಗೆ ಒಂದು ಅವಕಾಶ ಕೊಡಿ. ಇಷ್ಟವಾಗದಿದ್ದರೆ, ಬದಲಿಸಿ ಎಂದು ಕೋರಿದರು.

ನನಗೆ ರಾಜಕೀಯ ಗೊತ್ತಿಲ್ಲ. ಆದರೆ, ಭ್ರಷ್ಟಾಚಾರ ಕೊನೆಗಾಣಿಸುವುದು ಗೊತ್ತಿದೆ. ದೆಹಲಿಯಲ್ಲಿ ಭ್ರಷ್ಟಾಚಾರ ಅಂತ್ಯವಾಗಿದೆ, ಉಚಿತವಾಗಿ ವಿದ್ಯುತ್‌ ಸಿಗುತ್ತಿದೆ. ಪಂಜಾಬ್‌ನಲ್ಲಿ ಸರ್ಕಾರ ರಚನೆಯಾದ 10 ದಿನದಲ್ಲಿಯೇ ಈ ಯತ್ನ ಆರಂಭವಾಗಿದೆ ಎಂದರು.

ದೊಡ್ಡ ನಗರದ ಮೇಯರ್‌–ಟೀಕೆ: ಆಮ್‌ ಆದ್ಮಿ ಪಕ್ಷ (ಎಎಪಿ) ನಡೆಸಿದ ರೋಡ್‌ ಷೋ ಕುರಿತು ಬಿಜೆಪಿ ಅಣಕವಾಡಿದೆ. ಗುಜರಾತ್ ಸಚಿವ ಜಿತು ವಘಾನಿ ಅವರು ಕೇಜ್ರಿವಾಲ್‌ ಅವರನ್ನು ‘ದೊಡ್ಡ ನಗರವೊಂದರ ಮೇಯರ್’ ಎಂದು ಟೀಕಿಸಿದ್ದಾರೆ.

ಕೇಜ್ರಿವಾಲ್‌ ಮತ್ತು ಮಾನ್‌ ಇಬ್ಬರು ರಾಜ್ಯದ ಪ್ರವಾಸಿಗಳು. ಹಾಗೇ ಇರುತ್ತಾರೆ. ಏಕೆಂದರೆ, ಗುಜರಾತ್‌ ಜನ ಬಿಜೆಪಿ ಆಡಳಿತವನ್ನು ಪ್ರೀತಿಸುತ್ತಾರೆ. ಗುಜರಾತಿಗಳು ಎಲ್ಲರನ್ನೂ ಸ್ವಾಗತಿಸುತ್ತದೆ. ಜನರು ಬಿಜೆಪಿಯನ್ನಷ್ಟೇ ಇಷ್ಟಪಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.